ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ – ಮಧು ಬಂಗಾರಪ್ಪ
Madhu Bangarappa new order Hijab in Kesari shalu out in Government school colleges


ಧಾರ್ಮಿಕ ಸಂಕೇತ, ಚಿಹ್ನೆಗಳಿಗೆ ಅನುಮತಿ – ಮಧು ಬಂಗಾರಪ್ಪ
ಸರ್ವಶಿಕ್ಷಣ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದರು. ಈ ಮಾರ್ಗಸೂಚಿಗಳು 1 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗಲಿದೆ.
ವಿದ್ಯಾರ್ಥಿಗಳು ಸಾಮಾನ್ಯವಾಗಿ ಧರಿಸುವ ಪೇಟ (ಟರ್ಬನ್), ಜನಿವಾರ, ಪವಿತ್ರ ದಾರ, ಶಿವದಾರ, ರುದ್ರಾಕ್ಷಿ ಹಾಗೂ ತಲೆವಸ್ತ್ರ ಅಥವಾ ಹಿಜಬ್ ಧರಿಸಲು ಅನುಮತಿ ನೀಡಲಾಗಿದೆ. ಕೇಸರಿ ಶಾಲನ್ನು ಧಾರ್ಮಿಕ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಶಾಲಾ-ಕಾಲೇಜು ಆವರಣದಲ್ಲಿ ಕೇಸರಿ ಶಾಲು ಧರಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಸರ್ಕಾರದ ಆದೇಶದ ಇತರೆ ಅಂಶಗಳು
ಸಮವಸ್ತ್ರ ಕಡ್ಡಾಯ: ಎಲ್ಲಾ ಸರ್ಕಾರಿ,ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ನಿಗದಿಪಡಿಸಿದ ಸಮವಸ್ತ್ರವನ್ನೇ ಮುಂದುವರಿಸಬೇಕು.
ಪೂರಕ ಸಂಕೇತಗಳು: ಸಮವಸ್ತ್ರದ ಮೂಲ ಉದ್ದೇಶಕ್ಕೆ ಧಕ್ಕೆ ತರದಂತೆ ಸೀಮಿತ ಸಾಂಪ್ರದಾಯಿಕ ಸಂಕೇತಗಳನ್ನು (ಹಿಜಬ್, ಜನಿವಾರ ಇತ್ಯಾದಿ) ಧರಿಸಲು ಅಡ್ಡಿಯಿಲ್ಲ.
ಪ್ರವೇಶ ನಿರಾಕರಿಸುವಂತಿಲ್ಲ: ಈ ಧಾರ್ಮಿಕ ಸಂಕೇತಗಳನ್ನು ಧರಿಸಿದ್ದಾರೆ ಎಂಬ ಕಾರಣಕ್ಕೆ ಯಾವುದೇ ವಿದ್ಯಾರ್ಥಿಗೆ ತರಗತಿ ಅಥವಾ ಪರೀಕ್ಷಾ ಕೊಠಡಿಯ ಪ್ರವೇಶ ನಿರಾಕರಿಸುವಂತಿಲ್ಲ.
ಇಂತಹ ಸಂಕೇತಗಳನ್ನು ಧರಿಸುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸುವಂತಿಲ್ಲ ಅಥವಾ ಧರಿಸಿದವರನ್ನು ಬಲವಂತವಾಗಿ ತೆಗೆಸುವಂತೆಯೂ ಇಲ್ಲ.
ಪರೀಕ್ಷಾ ನಿಯಮ: ಪರೀಕ್ಷಾ ಸಂದರ್ಭದಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ವಸ್ತ್ರ ಸಂಹಿತೆಯ ನಿಯಮಗಳನ್ನು ಸಂಬಂಧಿಸಿದ ಪ್ರಾಧಿಕಾರಗಳು ಅಳವಡಿಸಿಕೊಳ್ಳಬಹುದು.
ಬಿಜೆಪಿ ಆದೇಶ ವಾಪಸ್
“ನಾವು ಮಕ್ಕಳ ಹಿತದೃಷ್ಟಿಯಿಂದ ಹಾಗೂ ಸಾಂವಿಧಾನಿಕ ಮೌಲ್ಯಗಳಾದ ಸಮಾನತೆ ಮತ್ತು ಜಾತ್ಯತೀತತೆಗೆ ಅನುಗುಣವಾಗಿ ಈ ನಿರ್ಧಾರ ತೆಗೆದುಕೊಂಡಿದ್ದು, 2022ರ ಬಿಜೆಪಿ ಸರ್ಕಾರದ ಆದೇಶವನ್ನು ವಾಪಸ್ ಪಡೆದಿದ್ದೇವೆ,” ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು. ಹೈಕೋರ್ಟ್ನ ಹಳೆಯ ತೀರ್ಪಿನ ಬಗ್ಗೆ ಕೇಳಿದ ಪ್ರಶ್ನೆಗೆ, “ಅದನ್ನು ಲೀಗಲ್ ತಂಡ ನೋಡಿಕೊಳ್ಳಲಿದೆ,” ಎಂದು ಉತ್ತರಿಸಿದರು. ಹೊಸ ಆದೇಶ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದ್ದು, ರಾಜ್ಯದಲ್ಲಿ ಮತ್ತೆ ಧಾರ್ಮಿಕ ಸಂಕೇತಗಳ ಚರ್ಚೆ ಮುನ್ನೆಲೆಗೆ ಬಂದಿದೆ.
#HijabAllowed #KarnatakaEducation #MadhuBangarappa #SchoolUniformPolicy #HijabBanLifted #BreakingNewsKarnataka #SaffronScarfBan #FreedomTV #EducationDepartment #SchoolNews #KarnatakaPolitics




