
ಬಡತನ ಮತ್ತು ಕಷ್ಟಗಳ ನಡುವೆಯೂ ಛಲಬಿಡದೆ ಓದಿದ ಅಳ್ಳಾವರ ತಾಲ್ಲೂಕಿನ ಕುಂಬಾರಕೊಪ್ಪ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಪ್ರತಿಕ್ಷಾ ಮಾಟೋಳ್ಳಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 512 ಅಂಕ ಗಳಿಸಿ ಕಾಲೇಜಿಗೇ ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಏಳು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತಂದೆಯನ್ನು ಕಳೆದುಕೊಂಡಿದ್ದ ಪ್ರತಿಕ್ಷಾ ಅವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿತ್ತು. ತಾಯಿ ಕೂಲಿ ಕೆಲಸ ಮತ್ತು ಬಟ್ಟೆ ಹೊಲಿಯುವ ಕಾಯಕದ ಮೂಲಕ ಮೂವರು ಮಕ್ಕಳನ್ನು ಸಾಕಿ ಸಲಹುತ್ತಿದ್ದು, ಪ್ರತಿಕ್ಷಾ ಕೂಡ ಬಿಡುವಿನ ವೇಳೆಯಲ್ಲಿ ತಾಯಿಗೆ ಬಟ್ಟೆ ಹೊಲಿಯಲು ಸಹಾಯ ಮಾಡುತ್ತಲೇ ತನ್ನ ಅಭ್ಯಾಸವನ್ನು ಮುಂದುವರಿಸಿದ್ದರು. ಈ ಕಡು ಬಡತನದ ನಡುವೆಯೂ ಅಕ್ಷರ ಕಲಿಯಬೇಕೆಂಬ ಆಕೆಯ ಅದಮ್ಯ ಆಸೆ ಇಂದು ಈ ಯಶಸ್ಸಿಗೆ ಕಾರಣವಾಗಿದೆ.
ಕನ್ನಡದಲ್ಲಿ 90, ರಾಜ್ಯಶಾಸ್ತ್ರದಲ್ಲಿ 96, ಭೂಗೋಳಶಾಸ್ತ್ರದಲ್ಲಿ 97, ಇತಿಹಾಸದಲ್ಲಿ 86, ಅರ್ಥಶಾಸ್ತ್ರದಲ್ಲಿ 85 ಮತ್ತು ಇಂಗ್ಲಿಷ್‌ನಲ್ಲಿ 58 ಅಂಕಗಳನ್ನು ಪಡೆದಿದ್ದಾರೆ. ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡು, ತಾಯಿಯ ಕಷ್ಟಕ್ಕೆ ಹೆಗಲಾಗಿ ನಿಂತು ಈ ಬಾಲಕಿ ಮಾಡಿರುವ ಸಾಧನೆ ಇತರ ವಿದ್ಯಾರ್ಥಿಗಳಿಗೆ ದೊಡ್ಡ ಪ್ರೇರಣೆಯಾಗಿದೆ. ಯಾವುದೇ ಸೌಲಭ್ಯಗಳಿಲ್ಲದಿದ್ದರೂ ಕೇವಲ ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯಿಂದ ಗುರಿ ತಲುಪಬಹುದು ಎಂಬುದನ್ನು ಪ್ರತಿಕ್ಷಾ ಸಾಬೀತುಪಡಿಸಿದ್ದಾರೆ. ಈ ಪ್ರತಿಭಾನ್ವಿತ ವಿದ್ಯಾರ್ಥಿನಿಯ ಸಾಧನೆಗೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.




