
ಬೆಂಗಳೂರು: ದೇವನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ನೂತನ ಪೊಲೀಸ್ ಠಾಣೆಯ ಉದ್ಘಾಟನಾ ಸಮಾರಂಭವು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಸಂಸದ ಡಾ. ಕೆ. ಸುಧಾಕರ್ ಅವರ ನಡುವಿನ ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಯಿತು. ಕಾರ್ಯಕ್ರಮದ ವೇದಿಕೆಯಲ್ಲೇ ಸಂಸದ ಸುಧಾಕರ್ ಅವರು ಈ ಭಾಗದಲ್ಲಿ ನಡೆಯುತ್ತಿರುವ ರಿಯಲ್ ಎಸ್ಟೇಟ್ ದಂಧೆಯ ಬಗ್ಗೆ ಗಂಭೀರ ಆರೋಪ ಮಾಡಿದರು. ಅಭಿವೃದ್ಧಿಯ ಹೆಸರಿನಲ್ಲಿ ಭೂ ದಂಧೆಗಳು ನಡೆಯುತ್ತಿವೆ ಎಂದು ಕಿಡಿಕಾರಿದ ಅವರು, ಪೊಲೀಸರು ಇಂತಹ ವಿಚಾರಗಳಲ್ಲಿ ಅತೀವ ಸೂಕ್ಷ್ಮವಾಗಿರಬೇಕು ಎಂದು ಸಲಹೆ ನೀಡಿದರು. ಅಷ್ಟೇ ಅಲ್ಲದೆ, “ಕೆಲವು ವಿಚಾರಗಳನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ, ವೈಯಕ್ತಿಕವಾಗಿ ಚರ್ಚಿಸುತ್ತೇನೆ” ಎಂದು ಹೇಳುವ ಮೂಲಕ ಪರೋಕ್ಷವಾಗಿ ಗೃಹ ಸಚಿವರಿಗೆ ತಿವಿತ ನೀಡಿದರು.
ಸಂಸದರ ಈ ಪಂಚ್‌ಗೆ ವೇದಿಕೆಯಲ್ಲೇ ನಗುತ್ತಲೇ ತಿರುಗೇಟು ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, “ನನಗೆ ಗೊತ್ತು ನೀವು ಎಚ್ಚರಿಕೆ ನೀಡಿದ್ದೀರಿ” ಎಂದು ಜಾಣ ಉತ್ತರ ನೀಡಿದರು. ಬಳಿಕ ಅಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಸಚಿವರು, ಇಲಾಖೆಯಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆದರೆ ಅಥವಾ ಕೇಸ್ ಸೆಟಲ್ಮೆಂಟ್ ಮಾಡಿ ಹಣ ಮಾಡುವ ಹಾದಿ ಹಿಡಿದರೆ ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು. ಪೊಲೀಸ್ ಠಾಣೆಯ ಉದ್ಘಾಟನಾ ಕಾರ್ಯಕ್ರಮವು ಹೀಗೆ ಪರಸ್ಪರ ಟಾಂಗ್ ಮತ್ತು ಆಡಳಿತಾತ್ಮಕ ಎಚ್ಚರಿಕೆಗಳ ಮೂಲಕ ರಾಜಕೀಯ ಸಮರಕ್ಕೆ ವೇದಿಕೆಯಾಯಿತು.




