ChikkamagaluruKODAGUಸುದ್ದಿ

ಪ್ರವಾಸಕ್ಕೆ ಬಂದಿದ್ದ ಕೇರಳದ ವಿದ್ಯಾರ್ಥಿನಿ ನಾಪತ್ತೆ..!

ಕೊಡಗಿನಲ್ಲಿ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಶರಣ್ಯ ಸುರಕ್ಷಿತವಾಗಿ ಪತ್ತೆಯಾದ ಬೆನ್ನಲ್ಲೇ, ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಕೇರಳ ಮೂಲದ ಮತ್ತೋರ್ವ ಬಾಲಕಿ ನಾಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಕೇರಳದ ಪಾಲಕ್ಕಾಡ್ ಮೂಲದ 14 ವರ್ಷದ ಶ್ರೀ ನಂದಾ ಎಂಬ ಬಾಲಕಿ ತನ್ನ ಪೋಷಕರು ಸೇರಿದಂತೆ ಸುಮಾರು 40 ಜನರ ಪ್ರವಾಸಿ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದಾಗ, ಮಂಗಳವಾರ ಸಂಜೆ 6 ಗಂಟೆಯ ಸುಮಾರಿಗೆ ಮಾಣಿಕ್ಯಧಾರಾ ಸಮೀಪ ಕಾಣೆಯಾಗಿದ್ದಾಳೆ. ಬಾಲಕಿ ಕಾಣೆಯಾದ ತಕ್ಷಣವೇ ಪ್ರವಾಸಿಗರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗದ ಕಾರಣ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ಬಾಲಕಿಯ ಪತ್ತೆಗಾಗಿ ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಕಳೆದ ರಾತ್ರಿಯಿಂದಲೂ ಜಂಟಿಯಾಗಿ ಬೃಹತ್ ಶೋಧ ಕಾರ್ಯವನ್ನು ನಡೆಸುತ್ತಿದ್ದಾರೆ. ಈ ಪರ್ವತ ಪ್ರದೇಶವು ಸಂಪೂರ್ಣವಾಗಿ ದಟ್ಟವಾದ ಹುಲ್ಲುಗಾವಲು ಹಾಗೂ ಕಡಿದಾದ ಇಳಿಜಾರುಗಳಿಂದ ಕೂಡಿರುವುದರಿಂದ ಕಾರ್ಯಾಚರಣೆಯು ರಕ್ಷಣಾ ತಂಡಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ ಆಧುನಿಕ ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡು ದಟ್ಟ ಕಣಿವೆಗಳಲ್ಲಿ ಹುಡುಕಾಟ ಮುಂದುವರಿಸಲಾಗಿದ್ದು, ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಬಾಲಕಿಯ ನಾಪತ್ತೆಯ ಹಿಂದೆ ಬೇರೆನಾದರೂ ಕಾರಣಗಳಿವೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಆಕೆಯ ಪೋಷಕರು ತೀವ್ರ ಆತಂಕದಲ್ಲಿದ್ದಾರೆ.

Comments (0)

Your email address will not be published. Required fields are marked *

Back to top button