interesting facts

ಬೇಸಿಗೆಯ ಅಮೃತ ಕಬ್ಬಿನ ಹಾಲು: ಆರೋಗ್ಯಕ್ಕೆ ಏನೇನು ಲಾಭ?

ಮನೆಯಿಂದ ಹೊರಗೆ ತಿರುಗಾಟದಲ್ಲಿದ್ದಾಗ, ಕೈಯಲ್ಲಿರುವ ನೀರೂ ಖಾಲಿಯಾದರೆ, ಬೇಸಿಗೆಯಲ್ಲಿ ಬೇರೆ ಶಾಪವೇ ಬೇಕಿಲ್ಲ. ದೇಹದ ನವರಂಧ್ರಗಳಿಂದ ಬೆವರಿಳಿಯುತ್ತಿರುವಾಗ ಯಾರಾದರೂ ಪುಣ್ಯಾತ್ಮರು ದೊಡ್ಡದೊಂದು ಗ್ಲಾಸ್‌ ತಂಪಾದ, ಸಿಹಿಯಾದ ಕಬ್ಬಿನ ಹಾಲು ತಂದುಕೊಟ್ಟರೆ? ಅವರ ಜನ್ಮ ಸವೆದರೂ ಮುಗಿಯದಷ್ಟು ಹರಸುತ್ತೇವೆ ಅವರನ್ನು. ಆ ಹೊತ್ತಿನ ದಾಹ ತಣಿಸುವುದಂತೂ ಸರಿ, ಅದಲ್ಲದೆ ಇನ್ನೇನೇನು ಲಾಭಗಳಿವೆ ಕಬ್ಬಿನ ಹಾಲು ಕುಡಿಯುವುದರಿಂದ ಎಂಬುದನ್ನು ತಿಳಿಯಬಹುದಲ್ಲ. ಬೇಸಿಗೆಯ ಸುಡುವ ಬಿಸಿಲಿನಲ್ಲಿ ಬಸವಳಿದು ಹೋದಾಗ, ರಸ್ತೆ ಬದಿಯ ಕಬ್ಬಿನ ಹಾಲಿನ ಗಾಡಿ ಕಂಡರೆ ಸಾಕು, ಪ್ರಾಣ ಬಂದಂತಾಗುತ್ತದೆ. ಐಸ್ ತುಂಡುಗಳೊಂದಿಗೆ ಬೆರೆತ ಆ ತಂಪಾದ ಕಬ್ಬಿನ ಹಾಲು ಗಂಟಲಿಗಿಳಿದಾಗ ಆಗುವ ಸುಖವೇ ಬೇರೆ. ಕೇವಲ ದಾಹ ತಣಿಸುವುದು ಮಾತ್ರವಲ್ಲದೆ, ಕಬ್ಬಿನ ಹಾಲಿನಲ್ಲಿ ಪ್ರಕೃತಿ ನೀಡಿರುವ ಅದ್ಭುತ ಔಷಧೀಯ ಗುಣಗಳಿವೆ.

ಹೆಚ್ಚೇನು ಫ್ಯಾನ್ಸಿ ಮಾಡದ ಶುದ್ಧ ಕಬ್ಬಿನ ಹಾಲು ಕೆಲವು ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ಆಗಬಲ್ಲದು. ದೇಹದ ರೋಗ ನಿರೋಧಕ ಶಕ್ತಿಯನ್ನು ಚುರುಕು ಮಾಡಿ, ಸೋಂಕುಗಳಿಂದ ಕಾಪಾಡಬಲ್ಲದು. ಅದರಲ್ಲೂ ಈ ರಸದಲ್ಲಿರುವ ಎಲೆಕ್ಟ್ರೋಲೈಟ್‌ ಗಳಿಂದಾಗಿ ದಣಿದ, ಆಯಾಸಗೊಂಡ ದೇಹಕ್ಕೆ ಸಂಜೀವಿನಿ ಎನಿಸಬಲ್ಲದು. ಕಬ್ಬಿನ ರಸದಲ್ಲಿರುವ ಕಬ್ಬಿಣ, ಮೆಗ್ನೀಶಿಯಂ, ಕ್ಯಾಲ್ಶಿಯಂ ಮತ್ತು ಇತೆ ಸೂಕ್ಷ್ಮ ಪೋಷಕಾಂಶ ಗಳಿಂದಾಗಿ, ದೇಹದ ಪ್ರೊಟೀನ್‌ ಹೀರಿಕೊಳ್ಳುವ ಸಾಮರ್ಥ್ಯವೂ ಹೆಚ್ಚಿ, ಸಾಮಾನ್ಯ ಶೀತ-ಜ್ವರಗಳ ಬಾಧೆ ಕಡಿಮೆಯಾಗುತ್ತದೆ.

ನಮ್ಮ ಜೀರ್ಣಾಂಗಗಳ ಹಿತ ಕಾಪಾಡುವಲ್ಲೂ ಕಬ್ಬಿನ ರಸದ್ದು ಶ್ಲಾಘನೀಯ ಕೆಲಸ. ಹೊಟ್ಟೆಯ ಪಿಎಚ್‌ ಮಟ್ಟವನ್ನು ಕಾಪಾಡಿಕೊಂಡು, ಆಹಾರ ಪಚನವಾಗುವುದಕ್ಕೆ ಬೇಕಾದ ಜೀರ್ಣ ರಸಗಳ ಬಿಡುಗಡೆಗೆ ನೆರವಾಗುತ್ತದೆ. ಇದರಿಂದಾಗಿ ಹೊಟ್ಟೆಯನ್ನು ಆಗಾಗ ಕಾಡುವ ಅಸಿಡಿಟಿ, ಹುಳಿತೇಗು ಮುಂತಾದ ಸಮಸ್ಯೆಗಳು ದೂರ ಉಳಿಯುತ್ತವೆ. ಕೆಲವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಕಬ್ಬಿನ ಹಾಲಿಗೆ ಶುಂಠಿ ರಸವನ್ನೂ ಸೇರಿಸಿಕೊಂಡು ಕುಡಿಯುವುದನ್ನು ಕಾಣಬಹುದು.

ಇಷ್ಟೊಂದು ಸಿಹಿಯಾದ ಪೇಯವನ್ನು ಮಧುಮೇಹಿಗಳು ಕುಡಿಯಬಹುದೇ, ಕುಡಿದರೆ ಆರೋಗ್ಯ ಏನಾದೀತು ಎಂಬ ಅನುಮಾನ ಬರುವುದು ಸಹಜವೇ. ಆದರೆ ಇದರ ಗ್ಲೈಸೆಮಿಕ್‌ ಇಂಡೆಕ್ಸ್‌ ಕಡಿಮೆಯೇ ಇದ್ದು, ರಕ್ತದಲ್ಲಿ ಸಕ್ಕರೆ ಅಂಶ ಏರುವಂತೆ ಮಾಡುವುದಿಲ್ಲ. ಹಾಗಾಗಿ ಮಧುಮೇಹಿಗಳೂ ಇದನ್ನು ಮಿತ ಪ್ರಮಾಣದಲ್ಲಿ ಕುಡಿಯಬಹುದು.

ತನ್ನಲ್ಲಿ ವಿಫುಲವಾಗಿರುವ ಖನಿಜ ಸತ್ವದಿಂದಾಗಿ ಮೂಳೆಗಳನ್ನು ಸದೃಢ ಮಾಡುವ ಸಾಧ್ಯತೆ ಕಬ್ಬಿನ ಹಾಲಿಗಿದೆ. ಜೊತೆಗೆ, ಹಲ್ಲುಗಳು ಹುಳುಕಾಗದಂತೆ ಕಾಪಾಡುವುದರೊಂದಿಗೆ, ದಂತಗಳ ಬೇರನ್ನೂ ಬಲಗೊಳಿಸು ಸಾಮರ್ಥ್ಯ ಇದರಲ್ಲಿರುವ ಫಾಸ್ಫರಸ್‌ ಅಂಶಕ್ಕಿದೆ. ದೇಹಕ್ಕೆ ಅಗತ್ಯ ಪೋಷಕಾಂಶಗಳು ದೊರೆಯದೆ ಇದ್ದಾಗ ಉಂಟಾಗುವ ಬಾಯಿಯ ದುರ್ಗಂಧ ತಡೆಯಲೂ ಇದು ಸಹಕಾರಿ.

ಕಬ್ಬಿನ ರಸವನ್ನು ಎಳನೀರು ಮತ್ತು ನಿಂಬೆ ರಸದೊಂದಿಗೆ ಬೆರೆಸಿ ಕುಡಿದಾಗ ಇನ್ನಷ್ಟು ಲಾಭಗಳು ದೇಹಕ್ಕೆ ದೊರೆಯುತ್ತವೆ. ಮೂತ್ರನಾಳದ ಸೋಂಕು, ಮೂತ್ರಪಿಂಡದಲ್ಲಿ ಕಲ್ಲು ಮುಂತಾದ ಹಲವಾರು ಸಮಸ್ಯೆಗಳಿಂದ ಕಾಡುವ ನೋವುಗಳ ನಿವಾರಣೆಗೆ ಈ ಮಿಶ್ರಣ ಉಪಯೋಗಿ ಎನಿಸಿದೆ. ದೇಹದಲ್ಲಿ ಉರಿಯೂತವನ್ನು ನಿವಾರಿಸುವ ಇದರ ಗುಣವೇ ಈ ನೋವು ಉಪಶಮನಕ್ಕೂ ಕಾರಣವಾಗಿದೆ.

ತ್ವಚೆಯ ಮೇಲೆ ಕಾಣಿಸಿಕೊಳ್ಳುವ ಮೊಡವೆಯಂಥ ಸಮಸ್ಯೆಗಳಿಗೂ ಕಬ್ಬಿನ ರಸ ಮದ್ದಾಗಬಲ್ಲದು. ಇದರಲ್ಲಿರುವ ಗ್ಲೈಕೋಲಿಕ್‌ ಆಮ್ಲವು ತ್ವಚೆಯ ಮೇಲಿನ ನಿರ್ಜೀವ ಕೋಶಗಳನ್ನು ತೆಗೆದು, ಹೊಳಪು ಮೂಡಿಸಲು ಉಪಯುಕ್ತ. ಮುಲ್ತಾನಿ ಮಿಟ್ಟಿಯ ಜೊತೆಗೆ ಕಬ್ಬಿನ ರಸವನ್ನು ಮಿಶ್ರ ಮಾಡಿ, ಫೇಸ್‌ಪ್ಯಾಕ್‌ ಮಾಡುವುದರಿಂದ ಚರ್ಮದ ಹೊಳಪು, ನುಣುಪು ವೃದ್ಧಿಸುತ್ತದೆ.

Comments (0)

Your email address will not be published. Required fields are marked *

Back to top button