ವಿಮಾನ ನಿಲ್ದಾಣದ ಕಾಂಪೌಂಡ್ ಜಿಗಿದು ಒಳಗೆ ನುಗ್ಗಿದ ಕರಡಿ..!

ಶಿವಮೊಗ್ಗ: ಶಿವಮೊಗ್ಗದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದ ಆವರಣಕ್ಕೆ ಆಹಾರ ಅರಸುತ್ತಾ ಬಂದ ಕರಡಿಯೊಂದು ನುಗ್ಗಿ ಭಾರಿ ಆತಂಕ ಸೃಷ್ಟಿಸಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಸತತ ಕಾರ್ಯಾಚರಣೆಯ ನಂತರ ಅದನ್ನು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ. ಇಂದು ಬೆಳಿಗ್ಗೆ ವಿಮಾನ ನಿಲ್ದಾಣದ ಸಮೀಪದ ವಿನಾಯಕ ನಗರದ ಮನೆಗಳು ಮತ್ತು ತೋಟಗಳ ಬಳಿ ಮೊದಲು ಕಾಣಿಸಿಕೊಂಡಿದ್ದ ಈ ಕರಡಿ, ಅರಣ್ಯ ಸಿಬ್ಬಂದಿ ಬೆನ್ನಟ್ಟಿದಾಗ ವಿಮಾನ ನಿಲ್ದಾಣದ ಕಾಂಪೌಂಡ್ ಜಿಗಿದು ಒಳಗೆ ನುಗ್ಗಿತ್ತು. ವಿಮಾನ ನಿಲ್ದಾಣದ ಒಳಗಿನ ಪೊದೆಗಳಲ್ಲಿ ಅಡಗಿದ್ದ ಕರಡಿಯು ನಂತರ ಹೊರಬಂದು ಜ್ಯೋತಿ ನಗರದ ಶಾಲೆಯ ಬಳಿ ಕುಳಿತಿದ್ದಾಗ, ಅರಣ್ಯ ಇಲಾಖೆ ತಜ್ಞರು ಅರವಳಿಕೆ ಮದ್ದು ನೀಡಿ ಅದನ್ನು ಸೆರೆಹಿಡಿದಿದ್ದಾರೆ. ಈ ಕರಡಿಯ ಓಡಾಟದ ದೃಶ್ಯಗಳು ಸ್ಥಳೀಯರ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ವಿಮಾನ ನಿಲ್ದಾಣದ ಭದ್ರತೆಯ ದೃಷ್ಟಿಯಿಂದಲೂ ಈ ಘಟನೆ ಚರ್ಚೆಗೆ ಕಾರಣವಾಗಿದೆ.
ಸೆರೆಹಿಡಿಯಲಾದ ಈ ಕರಡಿ ಹೆಣ್ಣಾಗಿದ್ದು, ಅದರ ಕೊರಳಲ್ಲಿ ರೇಡಿಯೋ ಕಾಲರ್ ಪತ್ತೆಯಾಗಿರುವುದು ವಿಶೇಷ ಕುತೂಹಲ ಮೂಡಿಸಿದೆ. ಈ ಕರಡಿಯು ಬಳ್ಳಾರಿಯ ದಾರೋಜಿ ಕರಡಿಧಾಮದ ಕಡೆಯಿಂದ ಬಂದಿರುವ ಸಾಧ್ಯತೆಯಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸದ್ಯ ಕರಡಿಯನ್ನು ಭದ್ರಾ ಅಭಯಾರಣ್ಯ ವ್ಯಾಪ್ತಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಎರಡು ದಿನಗಳ ಕಾಲ ತಜ್ಞರ ನಿಗಾದಲ್ಲಿ ಇರಿಸಿದ ಬಳಿಕ ಪುನರ್ವಸತಿ ಕೇಂದ್ರಕ್ಕೆ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ. ಜನವಸತಿ ಪ್ರದೇಶಗಳಲ್ಲಿ ಕರಡಿ ಕಾಣಿಸಿಕೊಂಡಿದ್ದರಿಂದ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದರೂ, ಅರಣ್ಯ ಇಲಾಖೆಯ ಸಮಯೋಚಿತ ಕ್ರಮದಿಂದ ಯಾವುದೇ ಅಹಿತಕರ ಘಟನೆ ನಡೆಯದೆ ಪರಿಸ್ಥಿತಿ ತಿಳಿಯಾಗಿದೆ.




