ಡಿಕೆಶಿಯಿಂದ ‘ಬಿ’ ಫಾರಂ ಪಡೆದ ಸಚಿವ ಮಲ್ಲಿಕಾರ್ಜುನ್!

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ತಮ್ಮ ಪುತ್ರ ಸಮರ್ಥ್ ಶಮನೂರು ಪರವಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಂದ ಅಧಿಕೃತವಾಗಿ ‘ಬಿ’ ಫಾರಂ ಪಡೆದ ನಂತರ ಮಾತನಾಡಿ, ಹೈಕಮಾಂಡ್ ನಿರ್ಧಾರದಂತೆ ಸಮರ್ಥ್ಗೆ ಟಿಕೆಟ್ ಘೋಷಣೆಯಾಗಿದ್ದು, ದಾವಣಗೆರೆ ಕಾಂಗ್ರೆಸ್ನಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಅಲ್ಪಸಂಖ್ಯಾತ ನಾಯಕರಿಗೆ ವೈಯಕ್ತಿಕವಾಗಿ ಧನ್ಯವಾದಗಳನ್ನು ಅರ್ಪಿಸಿದರು. ನಿನ್ನೆ ನಡೆದ ರಾಜಿ ಸಂಧಾನ ಸಭೆಯಲ್ಲಿ ಎಲ್ಲವೂ ಬಗೆಹರಿದಿದ್ದು, ಪಕ್ಷದ ಹಿರಿಯ ನಾಯಕರು ಅಲ್ಪಸಂಖ್ಯಾತ ಮುಖಂಡರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾವೆಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ ಮತ್ತು ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದಿದ್ದಾರೆ.
ಅಲ್ಪಸಂಖ್ಯಾತ ನಾಯಕರ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಟಿಕೆಟ್ ಕೇಳುವ ಹಕ್ಕಿದೆ, ಅದರಂತೆ ಅವರು ಕೇಳಿದ್ದರು. ಆದರೆ ಅಂತಿಮವಾಗಿ ಹೈಕಮಾಂಡ್ ಎಲ್ಲರ ಒಪ್ಪಿಗೆ ಪಡೆದೇ ಸಮರ್ಥ್ಗೆ ಟಿಕೆಟ್ ನೀಡಿದೆ. ನಾವೆಲ್ಲರೂ ಅಣ್ಣ-ತಮ್ಮಂದಿರಂತೆ ಇದ್ದೇವೆ ಮತ್ತು ನಮ್ಮದು 40 ವರ್ಷಗಳಿಂದ ಕಾಂಗ್ರೆಸ್ಗೆ ದುಡಿದಿರುವ ನಿಷ್ಠಾವಂತ ಕುಟುಂಬ ಎಂದು ನೆನಪಿಸಿದರು. ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಅಲ್ಪಸಂಖ್ಯಾತ ನಾಯಕರನ್ನು ಒಳಗೊಂಡಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.




