ಕೋರ್ಟ್ ಕಲಾಪದ ವೇಳೆ ಮಹಿಳಾ ನ್ಯಾಯಾಧೀಶರ ಮೇಲೆ ಬಿದ್ದ ಸೀಲಿಂಗ್ ಫ್ಯಾನ್!

ಮಧ್ಯಪ್ರದೇಶ: ಇಂದೋರ್ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗಲೇ ಸೀಲಿಂಗ್ ಫ್ಯಾನ್ ಕುಸಿದು ಬಿದ್ದು ಮಹಿಳಾ ನ್ಯಾಯಾಧೀಶರೊಬ್ಬರು ಗಾಯಗೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಕಲಾಪ ಅಂತಿಮ ಹಂತಕ್ಕೆ ಬಂದಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಭಾರಿ ಗಾತ್ರದ ಫ್ಯಾನ್ ನ್ಯಾಯಾಧೀಶರ ಕುರ್ಚಿ ಮೇಲೆಯೇ ಬಿದ್ದಿದ್ದು, ಅದರ ರಭಸಕ್ಕೆ ತಲೆ ಮತ್ತು ಭುಜದ ಭಾಗಕ್ಕೆ ಗಾಯಗಳಾಗಿವೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ವೈದ್ಯರು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಬಳಿಕ ಕುಟುಂಬದವರು ಅವರನ್ನು ಮನೆಗೆ ಕರೆದೊಯ್ದಿದ್ದಾರೆ.
ಈ ಘಟನೆಯು ನ್ಯಾಯಾಲಯದ ಹಳೆಯ ಕಟ್ಟಡಗಳ ದುಸ್ಥಿತಿಯನ್ನು ಎತ್ತಿ ತೋರಿಸಿದ್ದು, ವಕೀಲರ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾ ನ್ಯಾಯಾಲಯದ ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಲ್.ಎಲ್. ಯಾದವ್ ಅವರ ಪ್ರಕಾರ, ಕಟ್ಟಡದ ಕಳಪೆ ನಿರ್ವಹಣೆಯ ಬಗ್ಗೆ ಈ ಹಿಂದೆಯೇ ಹಲವು ಬಾರಿ ದೂರುಗಳನ್ನು ನೀಡಲಾಗಿತ್ತು. ಆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ ಇಂದು ನ್ಯಾಯಾಧೀಶರೇ ಪ್ರಾಣಾಪಾಯಕ್ಕೆ ಸಿಲುಕುವಂತಾಗಿದೆ. ಘಟನೆಯ ಬೆನ್ನಲ್ಲೇ ನ್ಯಾಯಾಲಯದ ವಿಚಾರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಕಟ್ಟಡದ ಸುರಕ್ಷತೆಯ ಬಗ್ಗೆ ವಕೀಲರು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದೋರ್‌ನ ಪಿಪ್ಲಿಯಾಹನ ಪ್ರದೇಶದಲ್ಲಿ ಹೊಸ ಜಿಲ್ಲಾ ನ್ಯಾಯಾಲಯದ ಸಂಕೀರ್ಣ ನಿರ್ಮಾಣವಾಗುತ್ತಿದ್ದರೂ, ಅದು ಪೂರ್ಣಗೊಳ್ಳಲು ಇನ್ನೂ 15 ರಿಂದ 18 ತಿಂಗಳುಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲಿಯವರೆಗೆ ಶಿಥಿಲಗೊಂಡಿರುವ ಹಳೆಯ ಕಟ್ಟಡದಲ್ಲೇ ಕಾರ್ಯನಿರ್ವಹಿಸುವುದು ಅಪಾಯಕಾರಿ ಎಂದು ವಕೀಲರು ಆತಂಕ ವ್ಯಕ್ತಪಡಿಸಿದ್ದಾರೆ. ಮಳೆಗಾಲದಲ್ಲಿ ನೀರು ಸೋರಿಕೆ, ದುರ್ಬಲ ಛಾವಣಿಗಳು ಮತ್ತು ದಶಕಗಳಷ್ಟು ಹಳೆಯದಾದ ವಿದ್ಯುತ್ ಉಪಕರಣಗಳು ನ್ಯಾಯಾಲಯದ ಕೊಠಡಿಗಳನ್ನು ‘ಸಾವಿನ ಬಲೆ’ಗಳನ್ನಾಗಿ ಪರಿವರ್ತಿಸಿವೆ ಎಂದು ವಕೀಲ ವಿನೋದ್ ದ್ವಿವೇದಿ ಕಿಡಿಕಾರಿದ್ದಾರೆ.
ಸದ್ಯಕ್ಕೆ ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿರುವ ವಕೀಲರು, ತಕ್ಷಣವೇ ಎಲ್ಲಾ ಕೊಠಡಿಗಳ ಸುರಕ್ಷತಾ ಲೆಕ್ಕಪರಿಶೋಧನೆ ನಡೆಸಬೇಕು ಮತ್ತು ಹಳೆಯ ವಿದ್ಯುತ್ ಉಪಕರಣಗಳನ್ನು ಬದಲಾಯಿಸಬೇಕೆಂದು ಪಟ್ಟು ಹಿಡಿದಿದ್ದಾರೆ.




