ಇರಾನ್ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಕರೆ; ಯುದ್ಧದ ನಡುವೆ ಈದ್ ಶುಭಾಶಯ!

ಮಧ್ಯಪ್ರಾಚ್ಯದ ಭೀಕರ ಯುದ್ಧ 22ನೇ ದಿನಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಡಾ. ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ದೂರವಾಣಿ ಮೂಲಕ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಸಂಭಾಷಣೆಯ ವೇಳೆ ಪ್ರಧಾನಿಯವರು ಇರಾನ್ ಅಧ್ಯಕ್ಷರಿಗೆ ಈದ್ ಉಲ್-ಫಿತ್ರ್ ಮತ್ತು ಇರಾನ್ ಹೊಸ ವರ್ಷ ‘ನೌರುಜ್’ ಹಬ್ಬದ ಶುಭಾಶಯಗಳನ್ನು ಕೋರಿದರು. ಪಶ್ಚಿಮ ಏಷ್ಯಾದಲ್ಲಿನ ಪ್ರಸ್ತುತ ಉದ್ವಿಗ್ನತೆಯು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದ್ದು, ಈ ಹಬ್ಬದ ಋತುವು ಪ್ರದೇಶಕ್ಕೆ ಶಾಂತಿ ಮತ್ತು ಸ್ಥಿರತೆಯನ್ನು ತರಲಿ ಎಂದು ಮೋದಿ ಆಶಯ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಅವರು ಪಶ್ಚಿಮ ಏಷ್ಯಾದ ನಿರ್ಣಾಯಕ ಮೂಲಸೌಕರ್ಯಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ತೀವ್ರವಾಗಿ ಖಂಡಿಸಿದರು. ಇಂತಹ ಕೃತ್ಯಗಳು ಕೇವಲ ಪ್ರಾದೇಶಿಕ ಸ್ಥಿರತೆಗೆ ಧಕ್ಕೆ ತರುವುದಲ್ಲದೆ, ಜಾಗತಿಕ ಪೂರೈಕೆ ಸರಪಳಿ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ಜಾಗತಿಕ ಆರ್ಥಿಕತೆಯನ್ನು ಕುಸಿಯುವಂತೆ ಮಾಡುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು. ಅಂತರಾಷ್ಟ್ರೀಯ ಸಮುದ್ರ ಮಾರ್ಗಗಳು ಮುಕ್ತವಾಗಿರಬೇಕು ಮತ್ತು ನೌಕಾಯಾನ ಸ್ವಾತಂತ್ರ್ಯಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಅನಿವಾರ್ಯ ಎಂದು ಹೇಳಿದರು.
ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಇರಾನ್ ಸರ್ಕಾರ ನೀಡುತ್ತಿರುವ ನಿರಂತರ ಬೆಂಬಲವನ್ನು ಪ್ರಧಾನಿ ಶ್ಲಾಘಿಸಿದರು. ಯುದ್ಧದ ಭೀತಿಯ ನಡುವೆಯೂ ಉಭಯ ದೇಶಗಳ ನಾಯಕರು ಹಬ್ಬದ ಸಂಭ್ರಮ ಹಂಚಿಕೊಳ್ಳುವುದರ ಜೊತೆಗೆ, ವ್ಯಾಪಾರ ಮತ್ತು ಸಮುದ್ರ ಮಾರ್ಗಗಳ ಸುರಕ್ಷತೆಯ ಕುರಿತು ಚರ್ಚಿಸಿರುವುದು ರಾಜತಾಂತ್ರಿಕವಾಗಿ ಅತ್ಯಂತ ಮಹತ್ವದ ನಡೆಯಾಗಿದೆ.




