ಮಾಲ್ಡೀವ್ಸ್ ಬೋಟ್ ಅಪಘಾತ;ರೇಮಂಡ್ ಗ್ರೂಪ್‌ನ ಅಧ್ಯಕ್ಷನಿಗೆ ಗಾಯ!

ಮಾಲ್ಡೀವ್ಸ್ : ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್‌ನಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ಸ್ಪೀಡ್ ಬೋಟ್ ಅಪಘಾತದಲ್ಲಿ ರೇಮಂಡ್ ಗ್ರೂಪ್‌ನ ಅಧ್ಯಕ್ಷ ಗೌತಮ್ ಸಿಂಘಾನಿಯಾ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಲ್ಡೀವ್ಸ್‌ನ ವಿ ಫೆಲಿಧೂ ಪ್ರದೇಶದ ಸಮೀಪ ಏಳು ಮಂದಿ ಪ್ರವಾಸಿಗರಿದ್ದ ಬೋಟ್ ಏಕಾಏಕಿ ಮಗುಚಿ ಬಿದ್ದಿದೆ. ಸಿಂಘಾನಿಯಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಏರ್ ಲಿಫ್ಟ್ ಮಾಡಿ ಮುಂಬೈಗೆ ಕರೆತರಲಾಗಿದೆ. ಪ್ರಸ್ತುತ ಅವರು ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಮುಕ್ತರಾಗಿದ್ದಾರೆ ಎಂದು ವಕ್ತಾರರು ಖಚಿತಪಡಿಸಿದ್ದಾರೆ.
ಅಪಘಾತದಲ್ಲಿ ಇಬ್ಬರು ಭಾರತೀಯರು ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾಗಿರುವುದು ಆತಂಕ ಮೂಡಿಸಿದೆ. ನಾಪತ್ತೆಯಾದವರಲ್ಲಿ ಭಾರತದ ಖ್ಯಾತ ರ‍್ಯಾಲಿ ಚಾಲಕ ಹರಿ ಸಿಂಗ್ ಮತ್ತು ಅವರ ಸ್ನೇಹಿತ ಸೇರಿದ್ದಾರೆ. ಅಪಘಾತದ ಸಮಯದಲ್ಲಿ ಬೋಟ್‌ನಲ್ಲಿ ಯುನೈಟೆಡ್ ಕಿಂಗ್‌ಡಮ್ ಮತ್ತು ರಷ್ಯಾದ ಇಬ್ಬರು ಮಹಿಳೆಯರು ಹಾಗೂ ಐವರು ಭಾರತೀಯ ಪುರುಷರು ಇದ್ದರು ಎಂದು ಮಾಲ್ಡೀವ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾದ ಮಹಿಳೆ ಸೇರಿದಂತೆ ನಾಲ್ವರು ಭಾರತೀಯರು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು, ರಕ್ಷಣಾ ತಂಡಗಳು ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ. ಆದರೆ ಹರಿ ಸಿಂಗ್ ಅವರ ಪತ್ತೆಗಾಗಿ ಶೋಧ ಕಾರ್ಯ ಇನ್ನೂ ಮುಂದುವರಿದಿದೆ.
ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗಿರುವ ಕಾರಣ ನಾಪತ್ತೆಯಾದವರನ್ನು ಪತ್ತೆಹಚ್ಚುವುದು ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆಗಳಿಗೆ ಸವಾಲಾಗಿ ಪರಿಣಮಿಸಿದೆ. ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಸುಧಾರಿತ ತಂತ್ರಜ್ಞಾನದ ನೆರವಿನೊಂದಿಗೆ ಶೋಧ ಕಾರ್ಯವನ್ನು ವಿಸ್ತರಿಸಲಾಗಿದೆ. ಹರಿ ಸಿಂಗ್ ಅವರ ಅಭಿಮಾನಿಗಳು ಮತ್ತು ಕುಟುಂಬಸ್ಥರು ಅವರು ಸುರಕ್ಷಿತವಾಗಿ ಮರಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ.




