ಯುದ್ಧದ ನಡುವೆ ಭಾರತಕ್ಕೆ ಗುಡ್ ನ್ಯೂಸ್; ಇರಾನ್‌ನಿಂದ ಮತ್ತೆ ತೈಲ ಆಮದು ಆರಂಭ!

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದು ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಯಾಗಿರುವ ಬೆನ್ನಲ್ಲೇ, ಭಾರತದ ಇಂಧನ ವಲಯಕ್ಕೆ ಒಂದು ಸಮಾಧಾನಕರ ಸುದ್ದಿ ಸಿಕ್ಕಿದೆ. ಇರಾನ್ ಮೇಲೆ ವಿಧಿಸಲಾಗಿದ್ದ ಕಠಿಣ ನಿರ್ಬಂಧಗಳನ್ನು ಅಮೆರಿಕ ಸರ್ಕಾರವು ತಾತ್ಕಾಲಿಕವಾಗಿ ಸಡಿಲಗೊಳಿಸಿದೆ. ಈ ಮಹತ್ವದ ಬೆಳವಣಿಗೆಯಿಂದಾಗಿ ಭಾರತದ ತೈಲ ಕಂಪನಿಗಳು ಇರಾನ್‌ನಿಂದ ಮತ್ತೆ ಕಚ್ಚಾ ತೈಲವನ್ನು ಖರೀದಿಸಲು ಸಜ್ಜಾಗಿವೆ ಎಂದು ತಿಳಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಇರಾನ್ ಸರ್ಕಾರವು ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಹಡಗುಗಳ ಸಂಚಾರವನ್ನು ತಡೆಯಲು ಮುಂದಾಗಿತ್ತು. ಇದರಿಂದಾಗಿ ಜಾಗತಿಕ ಮಾರುಕಟ್ಟೆಗೆ ತೈಲ ಪೂರೈಕೆ ಸ್ಥಗಿತಗೊಂಡು ಬೆಲೆ ಗಗನಕ್ಕೇರುವ ಆತಂಕವಿತ್ತು. ಈ ಪರಿಸ್ಥಿತಿಯನ್ನು ತಿಳಿಗೊಳಿಸಲು ಅಮೆರಿಕವು ಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಿ, ತೈಲ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ.
ಭಾರತವು ತನ್ನ ತೈಲ ಅಗತ್ಯಗಳಿಗಾಗಿ ಹೆಚ್ಚಾಗಿ ವಿದೇಶಗಳನ್ನೇ ಅವಲಂಬಿಸಿದೆ. ಈ ಹಿಂದೆ ಇರಾನ್ ಭಾರತಕ್ಕೆ ಅಗ್ಗದ ದರದಲ್ಲಿ ತೈಲವನ್ನು ಪೂರೈಸುತ್ತಿತ್ತು. ಆದರೆ ಅಮೆರಿಕದ ಒತ್ತಡ ಮತ್ತು ನಿರ್ಬಂಧಗಳಿಂದಾಗಿ ಕಳೆದ ಕೆಲವು ವರ್ಷಗಳಿಂದ ಈ ವ್ಯಾಪಾರ ನಿಂತುಹೋಗಿತ್ತು. ಈಗ ಮತ್ತೆ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲು ಹಾದಿ ಸುಗಮವಾಗಿರುವುದರಿಂದ, ಭಾರತಕ್ಕೆ ಕಡಿಮೆ ಬೆಲೆಯಲ್ಲಿ ಕಚ್ಚಾ ತೈಲ ಸಿಗುವ ಸಾಧ್ಯತೆ ದಟ್ಟವಾಗಿದೆ.




