ಸುದ್ದಿ

ಬನಶಂಕರಿಯಲ್ಲಿ ಯೂಟ್ಯೂಬರ್ ಸೂರ್ಯಗೆ ಧರ್ಮದೇಟು..!

ಬೆಂಗಳೂರು: ಬನಶಂಕರಿ ವ್ಯಾಪ್ತಿಯಲ್ಲಿ ಯೂಟ್ಯೂಬರ್ ವಿ2 ಸೂರ್ಯ ಮೇಲೆ ತಡರಾತ್ರಿ ಸಂಧ್ಯಾ ನಾಗರಾಜ್ ಮತ್ತು ಮಂಜು ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಕಳೆದ ಹಲವು ತಿಂಗಳುಗಳಿಂದ ಸೂರ್ಯ ಅವರು ಸಂಧ್ಯಾ ಎಂಬುವವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎನ್ನಲಾಗಿದ್ದು, ಇದೇ ಕಾರಣಕ್ಕೆ ಆಕ್ರೋಶಗೊಂಡಿದ್ದ ತಂಡವು ಬನಶಂಕರಿ ಬಳಿ ಸೂರ್ಯ ಸಿಕ್ಕಾಗ ಅವರ ಮೇಲೆ ಮುಗಿಬಿದ್ದಿದೆ ಎನ್ನಲಾಗಿದೆ.

ಈ ಹಲ್ಲೆಯ ಹಿಂದೆ ಹಳೆಯ ದ್ವೇಷದ ಹಿನ್ನೆಲೆ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸೂರ್ಯ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಸಂಧ್ಯಾ ಅವರಿಗೆ ಅಶ್ಲೀಲವಾಗಿ ಬೈಯುತ್ತಿದ್ದರು ಮತ್ತು ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬ ಗಂಭೀರ ಆರೋಪವಿದೆ. ಬನಶಂಕರಿ ಬಳಿ ತೆರಳುತ್ತಿದ್ದ ಸಂದರ್ಭದಲ್ಲಿ ಸೂರ್ಯ ಮತ್ತೆ ಸಂಧ್ಯಾ ಅವರಿಗೆ ನಿಂದಿಸಲು ಮುಂದಾದಾಗ, ಈ ಗಲಾಟೆ ವಿಕೋಪಕ್ಕೆ ಹೋಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ಘಟನೆ ನಡೆದ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈವರೆಗೆ ಯಾವುದೇ ಅಧಿಕೃತ ದೂರು ಅಥವಾ ಪ್ರತಿ ದೂರು ದಾಖಲಾಗಿಲ್ಲ. ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದು, ಘಟನೆಯ ಬಗ್ಗೆ ನಮಗೆ ತಿಳಿದಿದೆ ಆದರೆ ದೂರು ನೀಡಲು ಯಾರೂ ಮುಂದೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಒಂದು ವೇಳೆ ಸಂತ್ರಸ್ತರು ದೂರು ನೀಡಿದರೆ ಕೂಡಲೇ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈಯಕ್ತಿಕ ನಿಂದನೆ ಮತ್ತು ಅದಕ್ಕೆ ಪ್ರತಿಯಾಗಿ ನಡೆಯುವ ಇಂತಹ ಹಲ್ಲೆಗಳು ನಗರದಲ್ಲಿ ಕಾನೂನು ಸುವ್ಯವಸ್ಥೆಯ ಪ್ರಶ್ನೆಯನ್ನು ಎತ್ತಿವೆ. ಸದ್ಯಕ್ಕೆ ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಯೂಟ್ಯೂಬರ್ ಸೂರ್ಯ ಮತ್ತು ಸಂಧ್ಯಾ ನಡುವಿನ ಈ ಜಗಳ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

Comments (0)

Your email address will not be published. Required fields are marked *

Back to top button