SSLC ಪರೀಕ್ಷೆ ಬರೆದ ಬೆನ್ನಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ!

ಹೈದರಾಬಾದ್‌ನಲ್ಲಿ ಮನಕಲಕುವ ಅಮಾನವೀಯ ಘಟನೆಯೊಂದು ನಡೆದಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಬಂದ 10ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಆಘಾತಕಾರಿ ಘಟನೆಯು ನಗರದ ಸ್ಕ್ಯಾನಿಂಗ್ ಸೆಂಟರ್ ಒಂದರಲ್ಲಿ ಬೆಳಕಿಗೆ ಬಂದಿದ್ದು, ಪ್ರಸವದ ಬೆನ್ನಲ್ಲೇ ನವಜಾತ ಶಿಶುವನ್ನು ಕಸದ ಬುಟ್ಟಿಗೆ ಎಸೆದು ಬಾಲಕಿ ಮತ್ತು ಆಕೆಯ ತಾಯಿ ಪರಾರಿಯಾಗಲು ಯತ್ನಿಸಿದ್ದಾರೆ. ಪರೀಕ್ಷೆ ಮುಗಿಸಿ ಸ್ಕ್ಯಾನಿಂಗ್‌ಗಾಗಿ ಬಂದಿದ್ದ ಬಾಲಕಿಯು ಸ್ಕ್ಯಾನಿಂಗ್ ಸೆಂಟರ್‌ನ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ್ದು, ಈ ರಹಸ್ಯ ಯಾರಿಗೂ ತಿಳಿಯಬಾರದೆಂಬ ಕಾರಣಕ್ಕೆ ಮಗುವನ್ನು ಅಲ್ಲಿಯೇ ಇದ್ದ ಕಸದ ಬುಟ್ಟಿಗೆ ಎಸೆದು ಹೋಗಿದ್ದಾರೆ.
ಸ್ಕ್ಯಾನಿಂಗ್ ಸೆಂಟರ್‌ನ ಶೌಚಾಲಯದಿಂದ ಮಗುವಿನ ಅಳುವಿನ ಸದ್ದು ಕೇಳಿಬಂದಾಗ ಕೂಡಲೇ ಎಚ್ಚೆತ್ತ ಆಸ್ಪತ್ರೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಸದ ಬುಟ್ಟಿಯಲ್ಲಿ ಮಗು ಬಿದ್ದಿರುವುದನ್ನು ಕಂಡು ದಿಗ್ಭ್ರಮೆಗೊಂಡ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆ ಪುಟ್ಟ ಮಗುವನ್ನು ಐಸಿಯುನಲ್ಲಿ ದಾಖಲಿಸಲಾಗಿದ್ದು, ವೈದ್ಯರು ತೀವ್ರ ನಿಗಾ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ನವಜಾತ ಶಿಶುವಿನ ಆರೋಗ್ಯದ ಸ್ಥಿತಿಗತಿಯ ಬಗ್ಗೆ ವೈದ್ಯರು ನಿರಂತರ ನಿಗಾ ಇಟ್ಟಿದ್ದು, ಮಗು ಚೇತರಿಸಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.
ಹೈದರಾಬಾದ್ ಪೊಲೀಸರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಮಗುವಿನ ಜನ್ಮಕ್ಕೆ ಕಾರಣರಾದವರು ಯಾರು ಮತ್ತು ಈ ಅಮಾನವೀಯ ಕೃತ್ಯದ ಹಿಂದೆ ಯಾರ ಕೈವಾಡವಿದೆ ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಅಥವಾ ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆಯೇ ಎಂಬ ಆಯಾಮಗಳಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕಿ ಮತ್ತು ಆಕೆಯ ತಾಯಿಯನ್ನು ವಶಕ್ಕೆ ಪಡೆದು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.




