ಒಬ್ಬಳೇ ವಧು, ಇಬ್ಬರು ವರರು! ಒಂದೇ ಮಂಟಪದಲ್ಲಿ ಇಬರನ್ನು ವರಿಸಿದ ‘ಕಿಲಾಡಿ’ ಸುಂದರಿ

ಥೈಲ್ಯಾಂಡ್‌ನ ಪಟ್ಟಾಯದಲ್ಲಿ ನಡೆದ ವಿಚಿತ್ರ ಹಾಗೂ ಅಪರೂಪದ ವಿವಾಹವೊಂದು ಈಗ ಇಡೀ ಪ್ರಪಂಚದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. 37 ವರ್ಷದ ಥಾಯ್ ಸುಂದರಿ ಡುವಾಂಗ್ಡುವಾನ್ ಕೆಟ್ಸಾರೊ ಎಂಬಾಕೆ ಏಕಕಾಲದಲ್ಲಿ ಇಬ್ಬರು ಆಸ್ಟ್ರಿಯನ್ ಪುರುಷರನ್ನು ವರಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದಾರೆ.
ಈ ಮದುವೆಯ ವಿಶೇಷವೆಂದರೆ, ವಧುವಿನ ಇಬ್ಬರು ಪತಿಗಳೂ ಕೂಡ ನಿವೃತ್ತ ಪೊಲೀಸ್ ಅಧಿಕಾರಿಗಳಾಗಿದ್ದು, ಅವರಿಬ್ಬರೂ ಒಪ್ಪಿಗೆಯಿಂದಲೇ ಈಕೆಯ ಜೊತೆ ಜೀವನ ನಡೆಸಲು ನಿರ್ಧರಿಸಿದ್ದಾರೆ. ಪಟ್ಟಾಯದಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಮೊದಲು ಪರಿಚಯವಾದ ರೋಮನ್ ಎಂಬುವವರ ಜೊತೆ ಐದು ವರ್ಷಗಳ ಕಾಲ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ ಡುವಾಂಗ್ಡುವಾನ್, ಆನಂತರ ಮ್ಯಾಕಿ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಪ್ರೀತಿಸಲು ಶುರು ಮಾಡಿದ್ದರು. ಈ ಮೂವರ ನಡುವಿನ ಪ್ರೇಮ ಕಥೆಯಲ್ಲಿ ಯಾವುದೇ ಜಗಳ ಅಥವಾ ಮನಸ್ತಾಪ ಉಂಟಾಗದೆ, ಎಲ್ಲರೂ ಒಟ್ಟಾಗಿ ಒಂದೇ ಮನೆಯಲ್ಲಿ ವಾಸಿಸಲು ನಿರ್ಧರಿಸಿರುವುದು ಈ ಮದುವೆಯ ರೋಚಕ ಟ್ವಿಸ್ಟ್ ಆಗಿದೆ.

ಈ ಅಪರೂಪದ ವಿವಾಹಕ್ಕೆ ಕೇವಲ ವಧು-ವರರು ಮಾತ್ರವಲ್ಲದೆ, ಅವರ ಪೋಷಕರು ಮತ್ತು ಮಕ್ಕಳು ಕೂಡ ಪೂರ್ಣ ಸಮ್ಮತಿ ನೀಡಿದ್ದಾರೆ. ಈಗಾಗಲೇ ಮೂವರು ಹೆಣ್ಣುಮಕ್ಕಳ ತಾಯಿಯಾಗಿರುವ ಡುವಾಂಗ್ಡುವಾನ್ ಅವರ ಕುಟುಂಬದ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಹೊರಲು ಈ ಇಬ್ಬರು ವಿದೇಶಿ ಪತಿಗಳು ಸಿದ್ಧರಾಗಿದ್ದಾರೆ. ಮದುವೆಯ ಸಂಪ್ರದಾಯದಂತೆ ಇಬ್ಬರೂ ವರರು ತಲಾ 1 ಮಿಲಿಯನ್ ಥಾಯ್ ಬಹ್ತ್ (ಭಾರತೀಯ ರೂಪಾಯಿಗಳಲ್ಲಿ ಸುಮಾರು ₹29 ಲಕ್ಷ) ವಧುದಕ್ಷಿಣೆಯನ್ನು ನೀಡುವ ಮೂಲಕ ಅದ್ಧೂರಿಯಾಗಿ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ವಧುವಿಗೆ ಆಸರೆಯಾಗಿ ನಿಂತಿರುವ ಈ ಇಬ್ಬರು ಪತಿಗಳ ನಡೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೆಲವರು ಇದನ್ನು ವಿಚಿತ್ರ ಎಂದರೆ ಇನ್ನು ಕೆಲವರು ಅವರ ಪ್ರಾಮಾಣಿಕ ಒಪ್ಪಂದವನ್ನು ಶ್ಲಾಘಿಸಿದ್ದಾರೆ.
ಒಟ್ಟಾರೆಯಾಗಿ, ಸಾಂಪ್ರದಾಯಿಕ ಮದುವೆಗಳ ಚೌಕಟ್ಟನ್ನು ಮೀರಿ ನಡೆದಿರುವ ಈ ವಿವಾಹವು ಪ್ರೀತಿ ಮತ್ತು ಹೊಂದಾಣಿಕೆಯ ಹೊಸ ವ್ಯಾಖ್ಯಾನವನ್ನು ನೀಡುವಂತಿದೆ. ಕುಟುಂಬದ ಹಿತದೃಷ್ಟಿಯಿಂದ ಮತ್ತು ಪರಸ್ಪರ ಗೌರವದಿಂದ ಮೂವರೂ ಒಂದಾಗಿರಲು ತೆಗೆದುಕೊಂಡಿರುವ ಈ ತೀರ್ಮಾನವು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.




