Top Newsಜಿಲ್ಲೆಸುದ್ದಿ

ಕೊಪ್ಪಳ ಬಂದ್;ಶಾಲೆಗಳಿಗೆ ರಜೆ, ಪರೀಕ್ಷೆಗಳು ಮುಂದೂಡಿಕೆ!

ಕೊಪ್ಪಳ: ಪರಿಸರ ಮತ್ತು ಜನರ ಆರೋಗ್ಯದ ರಕ್ಷಣೆಗಾಗಿ ನಡೆಯುತ್ತಿರುವ ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿ ಹೋರಾಟವು ನಾಳೆಗೆ ( ಒಂದು ವರ್ಷ ಪೂರೈಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕೊಪ್ಪಳ ಮತ್ತು ಭಾಗ್ಯನಗರದಲ್ಲಿ ‘ಸ್ವಯಂಪ್ರೇರಿತ ಬಂದ್’ ಗೆ ಕರೆ ನೀಡಲಾಗಿದೆ. ಈ ಐತಿಹಾಸಿಕ ಹೋರಾಟಕ್ಕೆ ಜಿಲ್ಲಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಶೈಕ್ಷಣಿಕ ವಲಯದಲ್ಲೂ ಹಲವು ಬದಲಾವಣೆಗಳಾಗಿವೆ. ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೊಪ್ಪಳದ ಎಲ್ಲಾ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಕೊಪ್ಪಳ ವಿಶ್ವವಿದ್ಯಾಲಯವು ನಾಳೆ ನಡೆಸಬೇಕಿದ್ದ ಸ್ನಾತಕೋತ್ತರ ಪರೀಕ್ಷೆಗಳನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂದೂಡಿದೆ.

ಕಳೆದ ವರ್ಷ ಫೆಬ್ರವರಿ 24 ರಂದು ಗವಿಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಆರಂಭವಾದ ಈ ಹೋರಾಟವು, ಕಾರ್ಖಾನೆಯ ಮಾಲಿನ್ಯದ ವಿರುದ್ಧ ಜಿಲ್ಲೆಯ ಜನರ ಆಕ್ರೋಶದ ಸಂಕೇತವಾಗಿದೆ. ಜನಪ್ರತಿನಿಧಿಗಳಿಗೆ ನೀಡಿದ ಗಡುವು ಮುಗಿದರೂ ಯಾವುದೇ ಶಾಶ್ವತ ಪರಿಹಾರ ಸಿಗದ ಕಾರಣ, ಜಿಲ್ಲಾ ಬಚಾವೋ ಆಂದೋಲನ ಸಮಿತಿಯು ಕಳೆದ 116 ದಿನಗಳಿಂದ ಸತತ ಪ್ರತಿಭಟನೆ ನಡೆಸುತ್ತಿದೆ. ನಾಳೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿರುವ ಬಂದ್ ವೇಳೆ ಬೈಕ್ ರ‍್ಯಾಲಿ ಹಾಗೂ ಗವಿಮಠದಿಂದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ.

ಈ ಹೋರಾಟಕ್ಕೆ ಸಾಣೆಹಳ್ಳಿಯ ಪಂಡಿತಾರಾಧ್ಯ ಶ್ರೀಗಳು, ಗದಗಿನ ತೋಂಟದಾರ್ಯ ಶ್ರೀಗಳು ಸೇರಿದಂತೆ ನಾಡಿನ ಪ್ರಮುಖ ಮಠಾಧೀಶರು ಹಾಗೂ ಪರಿಸರ ಹೋರಾಟಗಾರರು ಸಾಥ್ ನೀಡುತ್ತಿರುವುದು ಹೋರಾಟಕ್ಕೆ ಹೊಸ ಶಕ್ತಿ ತುಂಬಿದೆ. ಗವಿಸಿದ್ದೇಶ್ವರ ಸ್ವಾಮೀಜಿಗಳ ಪರೋಕ್ಷ ಬೆಂಬಲವೂ ಈ ಆಂದೋಲನಕ್ಕಿದ್ದು, ಸೂಕ್ತ ಸಮಯದಲ್ಲಿ ಅವರು ಬೀದಿಗಿಳಿಯುವ ಭರವಸೆ ನೀಡಿದ್ದಾರೆ ಎಂದು ಹೋರಾಟದ ಸಮಿತಿ ತಿಳಿಸಿದೆ.

Comments (0)

Your email address will not be published. Required fields are marked *

Back to top button