ಸಿನಿಮಾಸುದ್ದಿ

ಪೊಲೀಸರ ನೋಟಿಸ್‌ಗೆ ರಣವೀರ್ ಸಿಂಗ್ ಕ್ಯಾರೆ ಎನ್ನದಿದ್ದಕ್ಕೆ ಹೈಗ್ರೌಂಡ್ಸ್ ಪೊಲೀಸರು ಗರಂ

ಬೆಂಗಳೂರು : ದೈವ ನಿಂದನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಗೆ ಬೆಂಗಳೂರಿನ ಪೊಲೀಸರು ನೋಟಿಸ್ ನೀಡಿದ್ದರೂ, ನಟನಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದು ಈಗ ಕಾನೂನು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಎರಡು ಬಾರಿ ನೋಟಿಸ್ ನೀಡಿದರೂ ‘ಡೋಂಟ್ ಕೇರ್’ ಎನ್ನುತ್ತಿರುವ ನಟನ ವಿರುದ್ಧ ಹೈಗ್ರೌಂಡ್ಸ್ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಗೋವಾದಲ್ಲಿ ನಡೆದ ಫಿಲ್ಮ್‌ಫೇರ್ ಕಾರ್ಯಕ್ರಮವೊಂದರಲ್ಲಿ ರಿಷಬ್ ಶೆಟ್ಟಿ ಅವರ ‘ಕಾಂತಾರ 2’ ಸಿನಿಮಾದ ಬಗ್ಗೆ ಮಾತನಾಡುವಾಗ ರಣವೀರ್ ಸಿಂಗ್ ಅವರು ದೈವದ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ವಕೀಲ ಪ್ರಶಾಂತ್ ನೀಡಿದ ದೂರಿನ ಮೇರೆಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಕೇಸ್ ದಾಖಲಾಗಿ 20 ದಿನಗಳಿಗೂ ಅಧಿಕ ಕಾಲ ಕಳೆದಿದ್ದರೂ ತನಿಖೆಗೆ ನಟ ಸಹಕರಿಸುತ್ತಿಲ್ಲ ಎನ್ನಲಾಗಿದೆ.

ಪೊಲೀಸರು ಈಗಾಗಲೇ ಮುಂಬೈನಲ್ಲಿರುವ ರಣವೀರ್ ಸಿಂಗ್ ನಿವಾಸಕ್ಕೆ ಖುದ್ದಾಗಿ ಎರಡು ಬಾರಿ ನೋಟಿಸ್ ತಲುಪಿಸಿದ್ದಾರೆ. ಅಷ್ಟೇ ಅಲ್ಲದೆ, ನಟನ ವಾಟ್ಸಾಪ್‌ಗೂ ನೋಟಿಸ್ ರವಾನಿಸಲಾಗಿದೆ. ಆದರೆ, ನಟನ ಕಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಅಥವಾ ಸ್ಪಷ್ಟನೆ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಮೂರನೇ ಬಾರಿ ನೋಟಿಸ್ ನೀಡಲು ಸಿದ್ಧತೆ ನಡೆಸುತ್ತಿದ್ದು, ಅದಕ್ಕೂ ಸ್ಪಂದಿಸದಿದ್ದರೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.

ದೈವದ ವಿಚಾರವು ಕರಾವಳಿ ಭಾಗದ ಜನರ ಭಾವನೆಗಳಿಗೆ ಸಂಬಂಧಿಸಿದ್ದಾಗಿದ್ದು, ರಣವೀರ್ ಸಿಂಗ್ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ತನಿಖಾಧಿಕಾರಿಗಳ ನೋಟಿಸ್‌ಗೆ ನಟ ಕನಿಷ್ಠ ಗೌರವ ನೀಡುತ್ತಿಲ್ಲ ಎಂಬುದು ಹೊಸ ವಿವಾದಕ್ಕೆ ಕಾರಣವಾಗಿದೆ.

Comments (0)

Your email address will not be published. Required fields are marked *

Back to top button