ಮಡಿಕೇರಿ: ಸಚಿವ ಎಚ್.ಸಿ. ಮಹದೇವಪ್ಪ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಯ್ಕೆಯಾಗಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ಗೆ ಬಹಿರಂಗವಾಗಿ ಒತ್ತಾಯಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ಸಿದ್ಧರಾಮಯ್ಯ ಅವರು ಪ್ರಸ್ತುತ ಅಧಿಕಾರದಲ್ಲಿದ್ದರೂ, ಮುಂದಿನ ದಿನಗಳಲ್ಲಿ ದಲಿತ ನಾಯಕರೊಬ್ಬರನ್ನು ರಾಜ್ಯದ ಉನ್ನತ ಸ್ಥಾನದಲ್ಲಿ ಕೂರಿಸುವುದು ಪಕ್ಷದ ಹಿತದೃಷ್ಟಿಯಿಂದ ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ದಲಿತರು ಗಣನೀಯ ಪ್ರಮಾಣದಲ್ಲಿದ್ದು, ಸದಾ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ನಿಂತಿದ್ದಾರೆ, ಕಾಂಗ್ರೆಸ್ ಪಕ್ಷವು ಸದೃಢವಾಗಿರಬೇಕಾದರೆ ತನ್ನ ಬೆನ್ನೆಲುಬಾದ ದಲಿತ ಸಮುದಾಯವನ್ನು ಗೌರವಿಸಬೇಕು ಮತ್ತು ಅವರಿಗೆ ನಾಯಕತ್ವದ ಅವಕಾಶ ನೀಡಬೇಕು. ಈ ವಿಚಾರದಲ್ಲಿ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತ ದಲಿತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ದಲಿತ ನಾಯಕರ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡಬಾರದು ಎಂದು ಎಚ್ಚರಿಸಿದ ಮಹದೇವಪ್ಪ, ಹೈಕಮಾಂಡ್ ಈಗಾಗಲೇ ಈ ಬಗ್ಗೆ ಗಮನ ಹರಿಸಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಲಿತ ಸಿಎಂ ಎನ್ನುವುದು ಕೇವಲ ಬೇಡಿಕೆಯಲ್ಲ, ಅದು ಸಮುದಾಯದ ದೀರ್ಘಕಾಲದ ಆಶಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ತಮ್ಮ ಶ್ರಮಕ್ಕೆ ತಕ್ಕ ಸ್ಥಾನಮಾನ ನೀಡಲಿದೆ ಎಂದು ನೀಡಿರುವ ಹೇಳಿಕೆಯ ಬಗ್ಗೆಯೂ ಮಹದೇವಪ್ಪ ಪ್ರತಿಕ್ರಿಯಿಸಿದ್ದಾರೆ. ರಾಜಕೀಯದಲ್ಲಿ ಪ್ರತಿಯೊಬ್ಬರಿಗೂ ಆಸೆ ಮತ್ತು ಆಕಾಂಕ್ಷೆಗಳು ಇರುವುದು ಸಹಜ, ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಅಂತಿಮವಾಗಿ ಯಾರಿಗೆ ಯಾವ ಸ್ಥಾನ ನೀಡಬೇಕು ಎಂಬುದನ್ನು ಹೈಕಮಾಂಡ್ ಪರಾಮರ್ಶಿಸಿ ತೀರ್ಮಾನಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.


