ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಕುರಿತು ಬರೆದ ಲೇಖನವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಸಿಎಂ ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ವ್ಯವಸ್ಥೆಯು ಪಟ್ಟಭದ್ರವಾಗಿ ಉಳಿಯದೆ ಚಲನಶೀಲತೆ ಪಡೆದುಕೊಂಡಾಗ ಮಾತ್ರ ಜನಪರ ಬದಲಾವಣೆ ಸಾಧ್ಯ , ನೀರು ನಿಂತಲ್ಲೇ ಇದ್ದರೆ ಕೆಸರಾಗುತ್ತದೆ, ಹರಿಯುತ್ತಿದ್ದರೆ ತಿಳಿಯಾಗುತ್ತದೆ” ಎಂಬ ಉದಾಹರಣೆಯೊಂದಿಗೆ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿರುವ ಅವರು, ಈ ಕುರಿತಾದ ಯಾವುದೇ ಸಾರ್ವಜನಿಕ ಸಂವಾದಕ್ಕೆ ತಾವು ಸಿದ್ಧರಿರುವುದಾಗಿ ತಿಳಿಸಿದ್ದಾರೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಜೆಡಿಎಸ್ ನಾಯಕರು ಸ್ವಜಾತಿ ವಿರೋಧಿಗಳು ಮತ್ತು ಕುಟುಂಬ ರಾಜಕಾರಣಕ್ಕೆ ಅಂಟಿಕೊಂಡವರು ಎಂದು ಆರೋಪಿಸಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಸ್ವಂತ ಜಾತಿಯ ಇತರ ನಾಯಕರು ಬೆಳೆಯದಂತೆ ತುಳಿದಿದ್ದಾರೆ ಎಂದು ದೂರಿದ ಸಿಎಂ, ಜೆಡಿಎಸ್ ತೊರೆದ ಒಕ್ಕಲಿಗ ನಾಯಕರ ಪಟ್ಟಿಯನ್ನೇ ಬಿಡುಗಡೆ ಮಾಡಿದ್ದಾರೆ. ಒಕ್ಕಲಿಗ ಮತ್ತು ದಲಿತ ನಾಯಕರಿಗೆ ಸೂಕ್ತ ಸ್ಥಾನಮಾನ ನೀಡಿ ಬೆಳೆಸಿದ್ದು ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ಎಂದಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ದಲಿತರನ್ನು ಮುಖ್ಯಮಂತ್ರಿ ಮಾಡುವ ತಾಕತ್ತು ಇದೆಯೇ ?ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಮರ್ಥ ಒಕ್ಕಲಿಗ ನಾಯಕರ ದಂಡೇ ಇದೆ, ಅಧಿಕಾರಕ್ಕಾಗಿ ತಾನು ಜಾತಿ ಕಾರ್ಡ್ ಬಳಸುತ್ತಿಲ್ಲ, ಕಳೆದ ನಾಲ್ಕು ದಶಕಗಳಿಂದ ಸಾಮಾಜಿಕ ನ್ಯಾಯದ ತತ್ವಕ್ಕೆ ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಮಾಜಿ ಸಚಿವ ಕೆ.ಎನ್. ರಾಜಣ್ಣ ನಿಂತಿದ್ದಾರೆ. ಸಿಎಂ ತಮ್ಮ ಲೇಖನದಲ್ಲಿ ವಾಸ್ತವವನ್ನೇ ಬರೆದಿದ್ದಾರೆ, ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿಯವರನ್ನು ಚಹಾ ಮಾರುವವರು ಎಂದು ಗುರುತಿಸುವಂತೆ, ಸಿದ್ದರಾಮಯ್ಯ ಅವರು ತಾವು ಕುರಿ ಕಾಯುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ರಾಜಣ್ಣ ಸಮರ್ಥಿಸಿಕೊಂಡಿದ್ದಾರೆ.


