Top Newsಸುದ್ದಿ

ರೋಹಿಣಿ ಸಿಂಧೂರಿಗೆ ಹೈಕೋರ್ಟ್ ಶಾಕ್; ಮಾನನಷ್ಟ ಕೇಸ್ ವಜಾ ಮಾಡಲು ನಿರಾಕರಣೆ!

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ನಡುವಿನ ಕಾನೂನು ಸಮರದಲ್ಲಿ ರೋಹಿಣಿ ಸಿಂಧೂರಿಗೆ ಹಿನ್ನಡೆಯಾಗಿದೆ. ಡಿ. ರೂಪಾ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ರೋಹಿಣಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಇದ್ದ ತಡೆ ತೆರವುಗೊಂಡಿದ್ದು, ಪ್ರಕರಣದ ತನಿಖೆ ಮುಂದುವರಿಯಲಿದೆ.2023ರ ಫೆಬ್ರವರಿಯಲ್ಲಿ ನಡೆದ ಸಾಮಾಜಿಕ ಜಾಲತಾಣದ ವಾಕ್ಸಮರ ಈ ಕಾನೂನು ಹೋರಾಟಕ್ಕೆ ಕಾರಣವಾಗಿತ್ತು. ರೋಹಿಣಿ ಸಿಂಧೂರಿ ಅವರು ತಮ್ಮ ಪೋಸ್ಟ್‌ನಲ್ಲಿ ಡಿ. ರೂಪಾ ಅವರನ್ನು “ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡವರು” ಎಂದು ಬಿಂಬಿಸಿದ್ದರು ಮತ್ತು ‘ಗೆಟ್ ವೆಲ್ ಸೂನ್’ ಎಂದು ವ್ಯಂಗ್ಯವಾಡಿದ್ದರು. ಈ ಹೇಳಿಕೆಗಳು ತಮ್ಮ ಘನತೆಗೆ ಧಕ್ಕೆ ತಂದಿವೆ, ಕುಟುಂಬಕ್ಕೆ ಮಾನಸಿಕ ಯಾತನೆ ನೀಡಿವೆ ಮತ್ತು ಆರು ತಿಂಗಳ ಕಾಲ ತಮಗೆ ಯಾವುದೇ ಹುದ್ದೆ ಸಿಗದೆ ವೇತನವಿಲ್ಲದೆ ಇರುವಂತೆ ಮಾಡಿವೆ ಎಂದು ಆರೋಪಿಸಿ ಡಿ. ರೂಪಾ ನ್ಯಾಯಾಲಯದ ಮೊರೆ ಹೋಗಿದ್ದರು.

ರೋಹಿಣಿ ಸಿಂಧೂರಿ ಅವರ ಹೇಳಿಕೆಯನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಇದು ಉದ್ದೇಶಪೂರ್ವಕವಾಗಿ ಮಾಡಿದ ಮಾನಹಾನಿ ಎಂದು ರೂಪಾ ದೂರಿದ್ದರು. ಈ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿರುವ ಕಾರಣ, ಈಗ ರೋಹಿಣಿ ಸಿಂಧೂರಿ ಅವರು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ವಿಚಾರಣೆಯನ್ನು ಎದುರಿಸುವುದು ಅನಿವಾರ್ಯವಾಗಿದೆ. ರಾಜ್ಯದ ಇಬ್ಬರು ಪ್ರಭಾವಿ ಮಹಿಳಾ ಅಧಿಕಾರಿಗಳ ನಡುವಿನ ಈ ಸಂಘರ್ಷ ಈಗ ನ್ಯಾಯಾಲಯದ ಅಂಗಳದಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ.

Comments (0)

Your email address will not be published. Required fields are marked *

Back to top button