ಉಡುಪಿ: ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್, ಸಾಮಾಜಿಕ ಹೊಣೆಗಾರಿಕೆ ಮತ್ತು ಅಭಿವೃದ್ಧಿ ಕೆಲಸಗಳಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಿ ನಿಂತಿದೆ. ಒಂದು ಕಾಲದಲ್ಲಿ ಜನರು ಹೋಗಲು ಹಿಂಜರಿಯುತ್ತಿದ್ದ ಚಿಟ್ಟಿಬೆಟ್ಟುವಿನ ಪರಿಶಿಷ್ಟ ಪಂಗಡದ (ಕೊರಗ ಸಮುದಾಯ) ಕಾಲೋನಿಯನ್ನು ಇಂದು ಅಭಿವೃದ್ಧಿಯ ಪಥಕ್ಕೆ ತರುವ ಮೂಲಕ ಪಂಚಾಯತ್ ಹೊಸ ಇತಿಹಾಸ ಬರೆದಿದೆ.
ದಶಕಗಳಿಂದ ಸರಿಯಾದ ಸೂರು ಇಲ್ಲದೆ, ಮಳೆ-ಗಾಳಿಗೆ ನಲುಗಿದ್ದ ಎಂಟು ಕೊರಗ ಕುಟುಂಬಗಳ ಬದುಕು ಈಗ ಸುಂದರವಾದ ಮನೆಗಳ ಮೂಲಕ ಹಸನಾಗಿದೆ.ಸರ್ಕಾರದ ವಸತಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಕೇವಲ 3.75 ಲಕ್ಷ ರೂಪಾಯಿ ಮಂಜೂರಾಗಿತ್ತು. ಆದರೆ, ಇಂದಿನ ದಿನಗಳಲ್ಲಿ ಈ ಮೊತ್ತದಲ್ಲಿ ಸುಸಜ್ಜಿತ ಮನೆ ನಿರ್ಮಿಸುವುದು ಅಸಾಧ್ಯದ ಮಾತಾಗಿತ್ತು. ಇದನ್ನು ಮನಗಂಡ ಕೋಟತಟ್ಟು ಗ್ರಾಮ ಪಂಚಾಯತ್, ಕೇವಲ ಸರ್ಕಾರಿ ಅನುದಾನಕ್ಕೆ ಕಾಯದೆ ದಾನಿಗಳ ನೆರವು ಪಡೆದು ವಿನೂತನ ಹಾದಿ ತುಳಿಯಿತು. ಪಂಚಾಯತ್ ಸದಸ್ಯರ ಶ್ರಮ ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ಅತ್ಯಂತ ಸುಂದರವಾದ ಮನೆಗಳನ್ನು ನಿರ್ಮಿಸಿ, ಆ ಕುಟುಂಬಗಳ ದಶಕಗಳ ಕನಸನ್ನು ನನಸು ಮಾಡಿದೆ.
ಕಾಂತಾರ ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಭಾಗವಹಿಸಿ ನೂತನ ಮನೆಗಳನ್ನು ಹಸ್ತಾಂತರಿಸಿದ್ದು ವಿಶೇಷವಾಗಿತ್ತು. ಶೋಷಿತ ಸಮುದಾಯದ ಬದುಕಿಗೆ ಭದ್ರತೆ ನೀಡುವಲ್ಲಿ ಪಂಚಾಯತ್ ತೋರಿದ ಈ ಕಾಳಜಿ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.


