Top Newsಸುದ್ದಿ

ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ; ವೇದಿಕೆಯಲ್ಲಿ ಸಿದ್ದು-ಡಿಕೆಶಿ ಮೌನ

ಕರ್ನಾಟಕ ರಾಜಕಾರಣದಲ್ಲಿ ‘ಸಿಎಂ ಕುರ್ಚಿ’ಗಾಗಿ ನಡೆಯುತ್ತಿರುವ ಹಗ್ಗಜಗ್ಗಾಟ ಮತ್ತೆ ಮುನ್ನೆಲೆಗೆ ಬಂದಿದೆ. ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡೆ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಪವರ್ ಶೇರಿಂಗ್ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ವೇದಿಕೆ ಹಂಚಿಕೊಂಡಿದ್ದರೂ, ಇಬ್ಬರೂ ನಾಯಕರು ಪರಸ್ಪರ ಮಾತನಾಡದೆ ಮೌನಕ್ಕೆ ಶರಣಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್‌ನಿಂದ ಸಿಎಂ ಸ್ಥಾನದ ಭರವಸೆ ಸಿಕ್ಕಿದೆ ಎನ್ನುವ ಉತ್ಸಾಹದಲ್ಲಿದ್ದರೆ, ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡು “ಹೈಕಮಾಂಡ್ ನಿರ್ಧಾರಕ್ಕೆ ಬದ್ಧ” ಎನ್ನುವ ಮಿತಭಾಷಿಯ ನಡೆಯನ್ನು ಅನುಸರಿಸುತ್ತಿದ್ದಾರೆ. ಸಮ್ಮೇಳನದ ವೇದಿಕೆಯಲ್ಲಿ ಅಕ್ಕಪಕ್ಕದಲ್ಲೇ ಕುಳಿತಿದ್ದರೂ ಇಬ್ಬರೂ ನಾಯಕರು ಪರಸ್ಪರ ದೃಷ್ಟಿ ಹರಿಸದಿದ್ದನ್ನು ಕಂಡು ಇಬ್ಬರ ನಡುವಿನ ಮುನಿಸು ತಾರಕಕ್ಕೇರಿದೆ ಎಂದು ಜನ ಅಂದಾಜಿಸುತ್ತಿದ್ದಾರೆ.

ಇದೇ ವೇಳೆ ಹೈಕಮಾಂಡ್ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, “ಶ್ರಮಕ್ಕೆ ತಕ್ಕ ಫಲ ಯಾವತ್ತೂ ಇದ್ದೇ ಇರುತ್ತದೆ” ಎನ್ನುವ ಮಾರ್ಮಿಕ ನುಡಿಗಳ ಮೂಲಕ ಶ್ರಮ-ಫಲ-ಪ್ರತಿಫಲದ ಜಪ ಮಾಡಿದ್ದಾರೆ. ರಾಜಕೀಯ ಬೆಳವಣಿಗೆಗಳ ನಡುವೆ ಅವರು ನೋಣವಿನಕೆರೆಯ ಅಜ್ಜಯ್ಯನ ಜಾತ್ರೆಗೆ ಹೋಗುತ್ತಿರುವುದು ವಿಶೇಷವಾಗಿ ಗಮನ ಸೆಳೆದಿದ್ದು, ಸಿಎಂ ಸ್ಥಾನಕ್ಕಾಗಿ ದೇವರ ಮೊರೆ ಹೋದ್ರಾ? ಎಂಬ ಪ್ರಶ್ನೆಗೆ, “ಇದು ಪ್ರತಿ ವರ್ಷದ ವಾಡಿಕೆ” ಎಂದು ಉತ್ತರಿಸಿದ್ದಾರೆ.

ಇನ್ನು ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಸಾವಿರ ದಿನಗಳು ಪೂರೈಸಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ‘ಭೂಮಿ ಗ್ಯಾರಂಟಿ’ ಕಾರ್ಯಕ್ರಮದ ಮೂಲಕ ಸಂಭ್ರಮವನ್ನು ಹಂಚಿಕೊಳ್ಳಲು ಸಜ್ಜಾಗಿರುವುದಾಗಿ ತಿಳಿಸಿದ್ದಾರೆ. ಮಾಜಿ ಸಚಿವ ಬೈರತಿ ಬಸವರಾಜ್ ಬಂಧನದ ಬಗ್ಗೆ ತಮಗೆ ಪತ್ರಿಕೆಯ ಮೂಲಕ ತಿಳಿದಿದ್ದೇ ಹೊರತು ಹೆಚ್ಚಿನ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ. ವಿದೇಶ ಪ್ರವಾಸದ ವರದಿ ಪಡೆಯುವ ಬಗ್ಗೆ ಹೈಕಮಾಂಡ್ ತಮ್ಮ ಜೊತೆ ಮಾತಾಡಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಪಕ್ಷದ ಆಂತರಿಕ ವಿದ್ಯಮಾನಗಳ ಬಗ್ಗೆ ಗುಟ್ಟು ಬಿಟ್ಟುಕೊಡದಂತೆ ಮಾತನಾಡಿದ್ದಾರೆ.

Comments (0)

Your email address will not be published. Required fields are marked *

Back to top button