ರಾಜಕೀಯರಾಜ್ಯಸುದ್ದಿ

ಜಾಮೀನು ಅರ್ಜಿ ವಜಾ, ವಿದೇಶಕ್ಕೆ ಪರಾರಿಯಾದ್ರಾ ಶಾಸಕ ಬಸವರಾಜ್ ..?

ರೌಡಿ ಷೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್.ಪುರ ಕ್ಷೇತ್ರದ ಶಾಸಕ ಭೈರತಿ ಬಸವರಾಜು ಅವರಿಗೆ ಸುಪ್ರೀಂಕೋರ್ಟ್‌ನಲ್ಲಿ ಭಾರೀ ಹಿನ್ನಡೆಯಾಗಿದೆ. ಶಾಸಕರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ಇದರೊಂದಿಗೆ ಭೈರತಿ ಬಸವರಾಜು ಅವರಿಗೆ ಇದ್ದ ಎಲ್ಲಾ ಕಾನೂನು ಆಯ್ಕೆಗಳು ಮುಚ್ಚಲ್ಪಟ್ಟಿವೆ. ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಶಾಸಕರ ಪರ ವಕೀಲರ ವಾದವನ್ನು ಆಲಿಸಲು ನಿರಾಕರಿಸಿದ್ದಲ್ಲದೆ, ಕೆಳ ಹಂತದ ನ್ಯಾಯಾಲಯದಲ್ಲಿಯೇ ನಿಯಮಿತ ಜಾಮೀನು ಅರ್ಜಿ ಸಲ್ಲಿಸಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, “ಹಿಂದೆ ನಿರೀಕ್ಷಣಾ ಜಾಮೀನು ಪಡೆದಾಗ ಹೇಗೆ ನಡೆದುಕೊಳ್ಳಬೇಕು ಎಂಬುದು ನಿಮಗೆ ತಿಳಿದಿಲ್ಲವೇ?” ಎಂದು ಶಾಸಕರನ್ನು ಖಾರವಾಗಿ ಪ್ರಶ್ನಿಸಿದೆ. ಶಾಸಕರು ಪೊಲೀಸ್ ವಿಚಾರಣೆಯನ್ನು ಎದುರಿಸಲೇಬೇಕು ಮತ್ತು ಸಿಐಡಿ ತನಿಖೆಯಿಂದ ದೂರ ಸರಿಯುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಸುಪ್ರೀಂಕೋರ್ಟ್‌ನ ಈ ಕಠಿಣ ನಿಲುವಿನಿಂದಾಗಿ ಭೈರತಿ ಬಸವರಾಜು ಅವರು ಯಾವುದೇ ಕ್ಷಣದಲ್ಲಾದರೂ ಸಿಐಡಿ ಪೊಲೀಸರ ಮುಂದೆ ಶರಣಾಗುವ ಸಾಧ್ಯತೆ ದಟ್ಟವಾಗಿದೆ. ಪೊಲೀಸರ ವಿಚಾರಣೆಗೆ ಹಾಜರಾಗುವುದು ಈಗ ಅನಿವಾರ್ಯವಾಗಿ ಪರಿಣಮಿಸಿದೆ.

ಇತ್ತ ಸಿಐಡಿ ಪೊಲೀಸರು ಶಾಸಕ ಭೈರತಿ ಬಸವರಾಜು ಅವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಶಾಸಕರು ಪ್ರಸ್ತುತ ಎಲ್ಲಿದ್ದಾರೆ ಎಂಬ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿಯಿಲ್ಲ. ಅವರು ಭಾರತದಲ್ಲೇ ಇದ್ದಾರಾ ಅಥವಾ ಉತ್ತರ ಪ್ರದೇಶದ ಗೋರಖ್‌ಪುರ ಗಡಿಯ ಮೂಲಕ ನೇಪಾಳಕ್ಕೆ ತೆರಳಿ, ಅಲ್ಲಿಂದ ದುಬೈಗೆ ಪರಾರಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖಾ ಸಂಸ್ಥೆಗಳಿಗೆ ಅನುಮಾನ ಕಾಡುತ್ತಿದೆ. ಒಟ್ಟಿನಲ್ಲಿ ಸುಪ್ರೀಂಕೋರ್ಟ್ ಆದೇಶದಿಂದ ಶಾಸಕರ ಸುತ್ತ ಕಾನೂನಿನ ಉರುಳು ಬಿಗಿಯಾದಂತಾಗಿದ್ದು, ಮುಂದಿನ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ.

Comments (0)

Your email address will not be published. Required fields are marked *

Back to top button