ಜಿಲ್ಲೆದೇಶ/ವಿದೇಶವೈರಲ್ ನ್ಯೂಸ್ಸುದ್ದಿ

ರೀಲ್ಸ್ ಹುಚ್ಚಿಗೆ ಮಕ್ಕಳನ್ನೇ ಬಾವಿಯ ಅಂಚಿಗೆ ತಳ್ಳಿದ ಮಹಿಳೆ; ವೀಕ್ಷಕರು ಶಾಕ್

ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವ್ಯೂಸ್‌ಗಾಗಿ ಜನರು ಎಂತಹ ಅಪಾಯಕಾರಿ ಹಂತಕ್ಕೆ ತಲುಪುತ್ತಿದ್ದಾರೆ ಎನ್ನುವುದಕ್ಕೆ ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋ ಒಂದು ಕರಾಳ ಸಾಕ್ಷಿಯಾಗಿದೆ. ಮಹಿಳೆಯೊಬ್ಬಳು ತನ್ನ ಪುಟ್ಟ ಮಕ್ಕಳ ಪ್ರಾಣವನ್ನೇ ಪಣಕ್ಕಿಟ್ಟು ಬಾವಿಯ ಅಂಚಿನಲ್ಲಿ ನಿಂತು ರೀಲ್ಸ್ ಮಾಡಿರುವ ಘಟನೆ ಈಗ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋವನ್ನು ಹಿರಿಯ ಐಪಿಎಸ್ ಅಧಿಕಾರಿ ವಿ.ಸಿ. ಸಜ್ಜನರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಹುಚ್ಚುತನದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.

ವೈರಲ್ ಆಗಿರುವ 30 ಸೆಕೆಂಡ್‌ಗಳ ವಿಡಿಯೋದಲ್ಲಿ, ಮಹಿಳೆಯೊಬ್ಬಳು ಆಳವಾದ ಬಾವಿಯ ತಡೆಗೋಡೆಯ ಮೇಲೆ ನಿಂತಿದ್ದು , ಆಕೆಯ ಎರಡೂ ಕೈಗಳಲ್ಲಿ ಸುಮಾರು ಮೂರರಿಂದ ನಾಲ್ಕು ವರ್ಷದ ಪುಟ್ಟ ಮಕ್ಕಳಿದ್ದು, ಅವರನ್ನು ಅಪಾಯಕಾರಿ ರೀತಿಯಲ್ಲಿ ಬಾವಿಯ ಅಂಚಿನಲ್ಲಿ ಹಿಡಿದುಕೊಂಡಿದ್ದಾಳೆ. ಕೊನೆಯಲ್ಲಿ ಕೇವಲ ಡ್ಯಾನ್ಸ್ ಮಾಡುವ ಸಲುವಾಗಿ ಆಕೆ ಮಕ್ಕಳ ಕೈ ಬಿಟ್ಟು ಸೊಂಟ ಬಳುಕಿಸಿರುವುದು ನೋಡುಗರ ಎದೆನಡುಗಿಸುವಂತಿದೆ. ಒಂದು ಕ್ಷಣ ಆಯತಪ್ಪಿದ್ದರೂ ಮಕ್ಕಳ ಜೀವಕ್ಕೆ ಕುತ್ತು ಬರುವ ಸಾಧ್ಯತೆಯಿದ್ದರೂ, ಆಕೆ ಮಾತ್ರ ಯಾವುದರ ಅರಿವಿಲ್ಲದೆ ರೀಲ್ಸ್ ಮಾಡುವುದರಲ್ಲಿ ಮಗ್ನಳಾಗಿದ್ದಾಳೆ.

ಈ ವಿಡಿಯೋ ಕಂಡು ಕೆಂಡಾಮಂಡಲವಾಗಿರುವ ಐಪಿಎಸ್ ಅಧಿಕಾರಿ ವಿ.ಸಿ. ಸಜ್ಜನರ್ ಅವರು, “ಇದು ಸಾಮಾಜಿಕ ಮಾಧ್ಯಮದ ಹುಚ್ಚುತನದ ಪರಮಾವಧಿ” ಎಂದು ಕಿಡಿಕಾರಿದ್ದಾರೆ. ಮಕ್ಕಳನ್ನು ರಕ್ಷಿಸಬೇಕಾದ ವಯಸ್ಕರೇ ಈ ರೀತಿ ಮೂರ್ಖತನದ ಪರಮಾವಧಿಗೆ ಇಳಿದರೆ ಸಮಾಜ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡುತ್ತದೆ , ಸಾಹಸದ ಹೆಸರಿನಲ್ಲಿ ಇಂತಹ ಆತ್ಮಹತ್ಯಾ ಸನ್ನಿವೇಶಗಳನ್ನು ಸೃಷ್ಟಿಸಬೇಡಿ ಮತ್ತು ಇಂತಹ ಕೃತ್ಯಗಳನ್ನು ಯಾರೂ ಪ್ರೋತ್ಸಾಹಿಸಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ನೆಟ್ಟಿಗರು ಕೂಡ ಮಹಿಳೆಯ ಈ ಬೇಜವಾಬ್ದಾರಿ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಮಕ್ಕಳ ಜೀವದ ಜೊತೆ ಆಟವಾಡುತ್ತಿರುವ ಈಕೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

Comments (0)

Your email address will not be published. Required fields are marked *

Back to top button