2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಇಂದು ಫೆಬ್ರವರಿ 7 ರಂದು ಅತ್ಯಂತ ಅದ್ಧೂರಿಯಾಗಿ ಚಾಲನೆ ಪಡೆಯುತ್ತಿದೆ. ಮುಂಬೈನ ಐತಿಹಾಸಿಕ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವು ಅಮೆರಿಕದ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಪ್ರಶಸ್ತಿ ರಕ್ಷಣೆ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯಕ್ಕೂ ಮುನ್ನ ಸ್ಟಾರ್ ನಟಿ ನೋರಾ ಫತೇಹಿ ಮತ್ತು ಖ್ಯಾತ ರ‍್ಯಾಪರ್ ಬಾದ್‌ಶಾ ಅವರನ್ನೊಳಗೊಂಡ ತಾರಾ ಬಳಗದಿಂದ ವರ್ಣರಂಜಿತ ಉದ್ಘಾಟನಾ ಸಮಾರಂಭವು ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಭಾರತ ತಂಡವು ಈ ಬಾರಿ ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಈವರೆಗೂ ಯಾವುದೇ ತಂಡ ಸತತ ಎರಡು ಬಾರಿ ಪ್ರಶಸ್ತಿ ಗೆದ್ದಿಲ್ಲ, ಜೊತೆಗೆ ಆತಿಥೇಯ ರಾಷ್ಟ್ರವೇ ಚಾಂಪಿಯನ್ ಆದ ಉದಾಹರಣೆಯೂ ಇಲ್ಲ. ಈ ಎರಡೂ ದಾಖಲೆಗಳನ್ನು ಮುರಿಯುವ ಹಂಬಲದಲ್ಲಿರುವ ಭಾರತಕ್ಕೆ ಯುವ ಆಟಗಾರರಾದ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರ ಸ್ಫೋಟಕ ಆರಂಭಿಕ ಜೋಡಿ ಆನೆಬಲ ತಂದಿದೆ.
ಪಂದ್ಯದ ಆರಂಭಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಸಣ್ಣ ಆಘಾತ ಎದುರಾಗಿದ್ದು, ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಇಂದಿನ ಪಂದ್ಯದಿಂದ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ದಟ್ಟವಾಗಿದೆ. ಗಾಯಾಳು ಹರ್ಷಿತ್ ರಾಣಾ ಅವರ ಬದಲಿಯಾಗಿ ತಂಡಕ್ಕೆ ಸೇರಿರುವ ಮೊಹಮ್ಮದ್ ಸಿರಾಜ್ ಇಂದಿನ ಪಂದ್ಯದಲ್ಲಿ ಅಂತಿಮ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಬೌಲಿಂಗ್ ವಿಭಾಗದಲ್ಲಿ ವರುಣ್ ಚಕ್ರವರ್ತಿ ಮತ್ತು ಅರ್ಶ್‌ದೀಪ್ ಸಿಂಗ್ ಅವರ ಪ್ರದರ್ಶನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಮತ್ತೊಂದೆಡೆ ಅಮೆರಿಕ ತಂಡವು ಸೌರಭ್ ನೇತ್ರವಾಲ್ಕರ್ ಅವರಂತಹ ಭಾರತೀಯ ಮೂಲದ ಪ್ರತಿಭಾನ್ವಿತ ಆಟಗಾರರನ್ನು ಹೊಂದಿದ್ದು, ಕಳೆದ ಆವೃತ್ತಿಯಂತೆ ಈ ಬಾರಿಯೂ ಅಚ್ಚರಿಯ ಫಲಿತಾಂಶ ನೀಡಲು ಸಜ್ಜಾಗಿದೆ. ಇಂದಿನ ಇತರ ಪಂದ್ಯಗಳಲ್ಲಿ ಪಾಕಿಸ್ತಾನ ತಂಡವು ನೆದರ್‌ಲೆಂಡ್ಸ್ ವಿರುದ್ಧ ಮತ್ತು ವೆಸ್ಟ್ ಇಂಡೀಸ್ ತಂಡವು ಸ್ಕಾಟ್ಲೆಂಡ್ ವಿರುದ್ಧ ಸೆಣಸಾಡಲಿದೆ.


