ಪ್ರೀತಿ ವಿಚಾರಕ್ಕೆ ಗಲಾಟೆ; ಯುವತಿ ಚಿಕ್ಕಪ್ಪನಿಂದ ಯುವಕನಿಗೆ ಚಾಕು ಇರಿತ

ಹುಬ್ಬಳ್ಳಿ: ಪ್ರೀತಿ ವಿಚಾರಕ್ಕೆ ಸಂಬಂಧಿಸಿದ ಗಲಾಟೆಯೊಂದರಲ್ಲಿ ಯುವಕನಿಗೆ ಚಾಕು ಇರಿದಿರುವ ಘಟನೆ ಹುಬ್ಬಳ್ಳಿಯ ಸದರಸೂಪಾ ಓಣಿಯಲ್ಲಿ ನಡೆದಿದೆ. ಗೌಸ್ ಮೊಯಿನುದ್ದೀನ್ ಚಾಕು ಇರಿತಕ್ಕೆ ಒಳಗಾದ ಯುವಕನಾಗಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ತಮ್ಮ ಮನೆಯ ಯುವತಿಯನ್ನು ಪ್ರೀತಿಸುತ್ತಿದ್ದಾನೆ ಎಂದು ಎಂಬ ಕೋಪಕ್ಕೆ ಗೌಸ್ ಮೊಯಿನುದ್ದೀನ್ಗೆ ವಸೀಂ ಎಂಬಾತ ಚಾಕು ಇರಿದಿದ್ದಾನೆ ಎಂಬ ಆರೋಪವಿದೆ. ಯುವತಿಯೇ ಕರೆ ಮಾಡಿ ಮೊಯಿನುದ್ದೀನ್ನನ್ನು ಓಣಿಗೆ ಕರೆಸಿಕೊಂಡಿದ್ದಾಳೆ. ಯುವತಿಯ ಮಾತು ನಂಬಿ ಬಂದಿದ್ದ ಗೌಸ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ.
ಕೂಡಲೇ ಗೌಸ್ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಘಟನೆ ಸಂಬಂಧ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಕು ಇರಿದ ಆರೋಪಿ ವಸೀಂ ಹಾಗೂ ಯುವತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಇನ್ನು ಪ್ರಕರಣದ ಸುದ್ದಿ ತಿಳಿದು ಹುಬ್ಬಳ್ಳಿ-ಧಾರವಾಡ ಕಮೀಷನರ್ ಎನ್. ಶಶಿಕುಮಾರ್ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಅಧಿಕಾರಿಗಳಿಂದ ಪ್ರಕರಣದ ಕುರಿತು ಮಾಹಿತಿ ಪಡೆದುಕೊಂಡರು.




