ಟೀಮ್ ಇಂಡಿಯಾ ಕ್ರಿಕೆಟಿಗ ನಮನ್ ಓಜಾ ತಂದೆಗೆ 7 ವರ್ಷ ಜೈಲು ಶಿಕ್ಷೆ

ಟೀಂ ಇಂಡಿಯಾದ ಮಾಜಿ ಆಟಗಾರ ನಮನ್ ಓಜಾ ತಂದೆ ವಿನಯ್ ಓಜಾ ಸೇರಿದಂತೆ ನಾಲ್ವರಿಗೆ ಜೈಲು ಶಿಕ್ಷೆ ಪ್ರಕಟವಾಗಿದೆ. ಬರೋಬ್ಬರಿ ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ಕಾನೂನು ಪ್ರಕ್ರಿಯೆಗಳ ನಂತರ ಶಿಕ್ಷೆ ಪ್ರಕಟವಾಗಿದೆ.
ವಿನಯ್ ಓಜಾ ವಿರುದ್ಧ 2013ರಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರಕ್ಕೆ 1.25 ಕೋಟಿ ರೂಪಾಯಿ ವಂಚಿಸಿದ ಆರೋಪ ಕೇಳಿಬಂದಿತ್ತು. 11 ವರ್ಷಗಳ ನಂತರ ನ್ಯಾಯಾಲಯ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ತಪ್ಪಿತಸ್ಥರು ಎಂದು ಮುಲ್ತಾಯಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ವಿನಯ್ ಓಜಾ ಸೇರಿದಂತೆ ಮೂವರಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 14 ಲಕ್ಷ ರೂಪಾಯಿ ದಂಡ ವಿಧಿಸಿದೆ. ಹಗರಣದ ಮಾಸ್ಟರ್ ಮೈಂಡ್ ಅಭಿಷೇಕ್ ರತ್ನಂಗೆ 10 ವರ್ಷ ಜೈಲು ಹಾಗೂ 80 ಲಕ್ಷ ರೂಪಾಯಿ ದಂಡ ವಿಧಿಸಿದೆ.ಈ ಹಗರಣದಲ್ಲಿ ಆರು ಮಂದಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಮನ್ ಓಜಾ ತಂದೆ ವಿನಯ್ ಓಜಾ ಆಗ ಅದೇ ಬ್ಯಾಂಕ್‌ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.
ಪ್ರಕರಣದ ಮಾಸ್ಟರ್ ಮೈಂಡ್ ಅಭಿಷೇಕ್ ರತ್ಮ ಜೊತೆ ಸೇರಿ ಬ್ಯಾಂಕ್ ಅಧಿಕಾರಿಗಳ ಪಾಸ್‌ವರ್ಡ್ ಕಳ್ಳತನ ಮಾಡಿ ಸಂಚು ರೂಪಿಸಿದ್ದರು. ನಕಲಿ ಖಾತೆಗಳನ್ನು ತೆರೆದು ಕೋಟ್ಯಂತರ ರೂಪಾಯಿ ವಂಚಿಸಿರೋದು ವಿಚಾರಣೆಯಿಂದ ಸಾಬೀತಾಗಿತ್ತು. ಪ್ರಕರಣ ಬೆಳಕಿಗೆ ಬಂದ ನಂತರ ಅಭಿಷೇಕ್ ರತ್ನಂ ಮತ್ತು ಕೆಲವರನ್ನು ಬಂಧಿಸಲಾಗಿತ್ತು. ನಮನ್ ಓಜಾ ತಂದೆಯನ್ನು 2022 ರಲ್ಲಿ ಬಂಧಿಸಲಾಗಿತ್ತು.
ನಮನ್ ಓಜಾ ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್. 2010ರಲ್ಲಿ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿದ್ದ ಓಜಾ 1 ಟೆಸ್ಟ್, 1 ಏಕದಿನ ಹಾಗೂ 2 ಟಿ20 ಪಂದ್ಯಗಳನ್ನು ಆಡಿದ್ದರು.




