Top Newsವೈರಲ್ ನ್ಯೂಸ್ಸುದ್ದಿ

ಇದಪ್ಪಾ ನಿಷ್ಠೆ ಅಂದ್ರೆ… ಹೆಪ್ಪುಗಟ್ಟಿದ ನದಿಯಲ್ಲಿ ಮೃತಪಟ್ಟ ಮಾಲೀಕನಿಗಾಗಿ ಕಾದು ಕುಳಿತ ಶ್ವಾನ..!

ಮಾಸ್ಕೋ: ಶ್ವಾನ ಮತ್ತು ಮನುಷ್ಯ ನಡುವೆ ಸಂಬಂಧ ಎಷ್ಟು ಗಾಢವಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ತನ್ನ ಮಾಲೀಕನ ಬಗ್ಗೆ ನಾಯಿಗಳು ತೋರುವ ಗೌರವ, ನಿಷ್ಠೆ. ಇದಕ್ಕೆ ಸಾಕಷ್ಟು ಉದಾಹರಣೆಗಳೂ ಇವೆ. ಅಂತಹ ಒಂದು ಸ್ಫೂರ್ತಿದಾಯಕ ಘಟನೆ ರಷ್ಯಾದಲ್ಲಿ ನಡೆದಿದೆ. ಮಾಲೀಕನ ದುರಂತ ಸಾವಿನ ಬಳಿಕ ನಾಯಿಯೊಂದು ಆತ ಬರುವಿಕೆಗಾಗಿ ಹೆಪ್ಪುಗಟ್ಟಿದ ನದಿಯ ಬಳಿ ಹಲವಾರು ದಿನ ಕಾದು ಕುಳಿತಿದ್ದು, ವಿಶ್ವದಾದ್ಯಂತ ಸಾಕಷ್ಟು ಮಂದಿಯ ಹೃದಯ ಗೆದ್ದಿದೆ.

ಶ್ವಾನಗಳು ಮಾನವನ ಅತ್ಯಂತ ನಿಷ್ಠಾವಂತ ಸಹಚರರು ಎಂದು ಬಹಳ ಹಿಂದಿನಿಂದಲೂ ಪ್ರಶಂಸಿಸಲ್ಪಟ್ಟಿವೆ ಅದೂ ನಿಜವು ಆಗಿದೆ. ಇದಕ್ಕೆ ಇನ್ನೊಂದು ಸಾಕ್ಷಿ ಅಂದ್ರೆ ರಷ್ಯಾದ ನಿಷ್ಠಾವಂತ ಬೆಲ್ಕಾ ಶ್ವಾನ. ತನ್ನ ಮಾಲೀಕ ದುರಂತವಾಗಿ ಸಾವನ್ನಪ್ಪಿದ ಬಳಿಕ ಅಚಲವಾದ ನಂಬಿಕೆಯಿಂದ ನದಿಯ ಬಳಿ ಕಾದು ಕುಳಿತಿದೆ.

ರಷ್ಯಾದ ಉಫಾ ಪ್ರದೇಶದಲ್ಲಿ 59 ವರ್ಷದ ವ್ಯಕ್ತಿಯೊಬ್ಬರು ಹೆಪ್ಪುಗಟ್ಟಿದ ನದಿಯ ಬಳಿ ಸೈಕಲ್ ತುಳಿಯುತ್ತಿದ್ದಾಗ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ದುರ್ಬಲವಾದ ಮಂಜುಗಡ್ಡೆಯ ಮೇಲೆ ಆತ ತೆರಳುತ್ತಿದ್ದಾಗ ಹಿಮಾವೃತ ನೀರಿನಲ್ಲಿ ಬಿದ್ದು ಮುಳುಗಿದ್ದಾನೆ. ದಾರಿಹೋಕನೊಬ್ಬ ಆತನನ್ನು ರಕ್ಷಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ. ರಕ್ಷಣಾ ತಂಡಗಳು ಸಾಕಷ್ಟು ಹುಡುಕಾಟವನ್ನು ನಡೆಸಿತು. ಕೊನೆಗೆ ಹಲವು ದಿನಗಳ ಕಾರ್ಯಾಚರಣೆಯ ಬಳಿಕ ಉಫಾ ನದಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ.

ಈ ದುರಂತದ ನಡುವೆ ಬೆಲ್ಕಾ ತನ್ನ ನಿಷ್ಠೆಯನ್ನು ಪ್ರದರ್ಶಿಸಿದೆ. ನಾಲ್ಕು ದಿನಗಳವರೆಗೆ ಬೆಲ್ಕಾ ನದಿಯ ದಡವನ್ನು ಬಿಟ್ಟು ತೆರಳಿಲ್ಲ. ತನ್ನ ಮಾಲೀಕನ ಆಗಮನಕ್ಕಾಗಿ ಕಾಯುತ್ತ ಕುಳಿತಿದೆ. ಮನೆಯವರು ಬಂದು ಅದನ್ನು ಕರೆದುಕೊಂಡು ಹೋದರೂ ಮರಳಿ ಅದು ಅದೇ ಸ್ಥಳಕ್ಕೆ ಪುನಃ ಪುನಃ ಬರುತ್ತಿದೆ . ಬ್ರೂಟ್ ಅಮೆರಿಕ ಈ ಕಥೆಯನ್ನು ವಿಡಿಯೋ ಸಹಿತ ಹಂಚಿಕೊಂಡ ಬಳಿಕ ಬೆಲ್ಕಾ ವಿಶ್ವದ ಗಮನ ಸೆಳೆದಿದೆ.

Comments (0)

Your email address will not be published. Required fields are marked *

Back to top button