ಮೈಸೂರಿನ ರೇವ್ ಪಾರ್ಟಿ ಮೇಲೆ ಇಲವಾಲ ಠಾಣೆ ಪೊಲೀಸರು ಏಕಾಏಕಿ ದಾಳಿ

ಮೈಸೂರು: ಮೈಸೂರಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಯುವತಿಯರನ್ನು ಸೇರಿ 54 ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.ಶನಿವಾರ ತಡರಾತ್ರಿ ಮೈಸೂರು ಹೊರವಲಯದಲ್ಲಿ ಈ ರೇಪ್ ಪಾರ್ಟಿ ಆಯೋಜನೆಯಾಗಿತ್ತು. ಈ ಸ್ಥಳದ ಮೇಲೆ ಇಲವಾಲ ಠಾಣೆ ಪೊಲೀಸರು ಏಕಾಏಕಿ ದಾಳಿ ಮಾಡಿದ್ದಾರೆ. ನಡೆಯುತ್ತಿದ್ದ ಪಾರ್ಟಿಗೆ ಬ್ರೇಕ್ ಹಾಕಿ ಯುವತಿಯರು ಸೇರಿದಂತೆ 54 ಕ್ಕೂ ಹೆಚ್ಚು ಮಂದಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. 30 ಕ್ಕೂ ಹೆಚ್ಚು ಕಾರುಗಳನ್ನ ವಶಪಡಿಸಿಕೊಳ್ಳಲಾಗಿದೆ.ಕೆ ಆರ್ ಎಸ್ ಹಿನ್ನೀರು ಬಳಿಯ ಖಾಸಗಿ ಜಮೀನಿನಲ್ಲಿ ರೇವ್ ಪಾರ್ಟಿ ಆಯೋಜಿಸಿತ್ತೆಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದನ್ನ ವ್ಯಕ್ತಿಯೊಬ್ಬ ಪ್ರಚಾರ ಮಾಡಿದ್ದ ಹಿನ್ನಲೆ ಸುಮಾರು 25 ಕ್ಕೂ ಹೆಚ್ಚು ಜೋಡಿಗಳು ಪಾರ್ಟಿಗೆ ನೊಂದಾಯಿಸಿಕೊಂಡಿದ್ದರು. ಶನಿವಾರ ತಡರಾತ್ರಿ ಪಾರ್ಟಿ ಆರಂಭವಾಗಿತ್ತು. ಡಿಜೆ ಮೂಲಕ ಅಬ್ಬರದ ಸಂಗೀತ ಏರ್ಪಡಿಸಲಾಗಿತ್ತೆಂದು ಹೇಳಲಾಗಿದೆ. ಮಾಹಿತಿ ಅರಿತ ಪೊಲೀಸರು ಎಸ್ಪಿ ವಿಷ್ಣುವರ್ಧನ್ ರವರ ನೇತೃತ್ವದಲ್ಲಿ ಅಡಿಷನಲ್ ಎಸ್ಪಿ ನಾಗೇಶ್ ಹಾಗೂ ಡಿವೈಎಸ್ಪಿ ಕರೀಂ ರಾವತರ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.
ಯುವಕ ಯುವತಿಯರ ವೈದ್ಯಕೀಯ ತಪಾಸಣೆ
ವಶಪಡಿಸಿಕೊಳ್ಳಲಾದ ಯುವಕ ಯುವತಿಯರನ್ನ ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ. ಪಾರ್ಟಿಗಾಗಿ ಬಳಸಲಾದ ಸಂಗೀತ ಉಪಕರಣಗಳನ್ನೂ ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗಾಂಜಾ ಮಾರಾಟ ಮಾಡುತ್ತಿದ್ದನ ಬಂಧನ
ಪ್ರತ್ಯೇಕ ಪ್ರಕರಣದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಸೆನ್ ಠಾಣೆ ಪೊಲೀಸರು ಬಂಧಿಸಿದ್ದು, ಆತನಿಂದ 1.20 ಲಕ್ಷ ರೂ. ಮೌಲ್ಯದ 4 ಕೆಜಿ 130 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಕೇರಳ ಮೂಲದ ಗುಂಡ್ಲುಪೇಟೆಯಲ್ಲಿ ವಾಸಿಸುತ್ತಿರುವ ಅಕ್ಬರ್ ಪಾಷಾ ಬಂಧಿತ ಆರೋಪಿ. ಸೆಪ್ಟೆಂಬರ್ 25 ರಂದು ಸೆನ್ ಠಾಣೆ ಪೊಲೀಸರು ಗಸ್ತಿನಲ್ಲಿಇದ್ದ ವೇಳೆ ಗಾಯಿತ್ರಿಪುರಂ ಚರ್ಚ್ ಬಳಿ ಬ್ಯಾಗ್ ಹಿಡಿದು ನಿಂತಿದ್ದ ಅಕ್ಬರ್ ಪಾಷನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




