ದೇಶ/ವಿದೇಶರಾಜಕೀಯ

ಸಿದ್ದು ರಾಜೀನಾಮೆ-ರಾಹುಲ್ ಗಾಂಧಿ ಒಬಿಸಿ ವಿರೋಧಿ ಎಂದ ಶೆಹಜಾದ್ ಪೂನಾವಾಲಾ

Shehazad Poonawala says Rahul Gandhi is Anti OBC

ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ಪಡೆದು, ಡಿ.ಕೆ. ಶಿವಕುಮಾರ್ ಅವರು ಆಡಳಿತದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಇತ್ತ ದೇಶದ ರಾಜಧಾನಿ ದೆಹಲಿಯಲ್ಲಿ ರಾಜಕೀಯ ಭರಾಟೆ ಶುರುವಾಗಿದೆ. ಕರ್ನಾಟಕದ CM ಬದಲಾವಣೆಯನ್ನೇ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಹಸ್ತ ಪಾಳಯದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್‌ನಲ್ಲಿ ಒಬಿಸಿ ಮುಖ್ಯಮಂತ್ರಿಗಳೇ ಇಲ್ಲ – ಪೂನಾವಾಲಾ ವಾಗ್ದಾಳಿ!


ವಿಶೇಷ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ರಾಹುಲ್ ಗಾಂಧಿ ಅವರ ದ್ವಂದ್ವ ನಿಲುವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. “ರಾಹುಲ್ ಗಾಂಧಿ ಅವರ ತತ್ತ್ವಗಳು ಆನೆಯ ದಂತದಂತಿವೆ. ತೋರಿಸುವುದು ಒಂದು, ತಿನ್ನುವುದು ಮತ್ತೊಂದು. ದೇಶಾದ್ಯಂತ ಕೇವಲ ಜಾತಿ ಜನಗಣತಿ, ಒಬಿಸಿ ಹಕ್ಕುಗಳು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಹಕ್ಕು ಸಿಗಬೇಕು ಎಂದು ದಿನದ 24 ಗಂಟೆ ಭಜಿಸುವ ರಾಹುಲ್ ಗಾಂಧಿ, ತಮ್ಮದೇ ಪಕ್ಷದಲ್ಲಿ ಹಿಂದುಳಿದ ವರ್ಗಗಳ ನಾಯಕರನ್ನು ಬೆಳೆಸಲು ಸಂಪೂರ್ಣ ವಿಫಲರಾಗಿದ್ದಾರೆ” ಎಂದು ಟೀಕಿಸಿದರು.

ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕ ಹಾಗೂ ‘ಅಹಿಂದ’ ಸಮುದಾಯಗಳ ಗಟ್ಟ ಧ್ವನಿ ಎಂದೇ ಹೆಸರಾಗಿದ್ದ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಡಿ.ಕೆ. ಶಿವಕುಮಾರ್ ಅವರನ್ನು ಕೂರಿಸಿರುವುದು ಯಾವ ಸಾಮಾಜಿಕ ನ್ಯಾಯ. ಈ ಬದಲಾವಣೆಯೊಂದಿಗೆ, ಇಡೀ ದೇಶದಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಪೈಕಿ ಈಗ ಒಬ್ಬನೇ ಒಬ್ಬ ಒಬಿಸಿ (OBC) ಮುಖ್ಯಮಂತ್ರಿ ಇಲ್ಲದಂತಾಗಿದೆ ಎಂದು ಬಿಜೆಪಿ ಪಟ್ಟಿ ಸಮೇತ ವಾಗ್ದಾಳಿ ನಡೆಸಿದೆ.

ಬಿಜೆಪಿಯಲ್ಲಿ ಒಬಿಸಿ ಪ್ರಧಾನಿ; ಕಾಂಗ್ರೆಸ್‌ನಲ್ಲಿ ಒಬಿಸಿಗೆ ಅಪಮಾನ!
ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ (CWC) ಅಥವಾ ರಾಜೀವ್ ಗಾಂಧಿ ಫೌಂಡೇಶನ್ (RGF) ಟ್ರಸ್ಟ್‌ನಲ್ಲಿ ಒಬಿಸಿ ನಾಯಕರಿಗೆ ಯಾವುದೇ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂದು ಆರೋಪಿಸಿದ ಪೂನಾವಾಲಾ, ಬಿಜೆಪಿಯ ಸಾಧನೆಯನ್ನು ಮುನ್ನೆಲೆಗೆ ತಂದರು. “ಕಾಂಗ್ರೆಸ್‌ಗೆ ವ್ಯತಿರಿಕ್ತವಾಗಿ ಬಿಜೆಪಿ ಒಬ್ಬ ಹಿಂದುಳಿದ ವರ್ಗದ ನಾಯಕನಾದ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿದೆ. ಅವರು ಈಗ ಯಶಸ್ವಿಯಾಗಿ ಮೂರನೇ ಬಾರಿಗೆ ದೇಶ ಮುನ್ನಡೆಸುತ್ತಿದ್ದಾರೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇರುವ ಅಸಲಿ ವ್ಯತ್ಯಾಸ” ಎಂದು ಹೆಮ್ಮೆಯಿಂದ ನುಡಿದರು.
ಕಾಂಗ್ರೆಸ್ ಪಕ್ಷವು ಕೇವಲ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತದೆ ವಿನಃ ಆಡಳಿತದಲ್ಲಿ ಒಬಿಸಿ ನಾಯಕರಿಗೆ ಅಧಿಕಾರ ನೀಡುವುದಿಲ್ಲ. ಈ ಹಿಂದೆ ಸೀತಾರಾಂ ಕೇಸರಿ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೂ ಕಾಂಗ್ರೆಸ್ ಅಪಮಾನ ಮಾಡಿತ್ತು. ಮುಸ್ಲಿಂ ಮೀಸಲಾತಿ ಹಾಗೂ ಆರ್ಟಿಕಲ್ 370 ಅನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ ನಿಜವಾದ ಅರ್ಥದಲ್ಲಿ ಹಿಂದುಳಿದ ವರ್ಗಗಳ ವಿರೋಧಿಯಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಕರ್ನಾಟಕದ ಸಿಎಂ ಬದಲಾವಣೆ ಪ್ರಕ್ರಿಯೆ ಈಗ ದೆಹಲಿ ಮಟ್ಟದಲ್ಲಿ ಕಾಂಗ್ರೆಸ್‌ಗೆ ಭಾರಿ ಮುಜುಗರ ತಂದಿಟ್ಟಿದೆ.

#FreedomTV #KarnatakaPolitics #SiddaramaiahResigns #DKShivakumar #RahulGandhi #ShehzadPoonawalla #BJPvsCongress #OBCCM #NarendraModi #DelhiPolitics #CWC #CasteCensus #BreakingNewsIndia #PoliticalWar #ಕನ್ನಡಸುದ್ದಿ #ಬಿಜೆಪಿ_ವಾಗ್ದಾಳಿ

Comments (0)

Your email address will not be published. Required fields are marked *

Back to top button