
ಬೆಂಗಳೂರು: ರಾಜಭವನಕ್ಕೆ ತೆರಳಿ ಅಧಿಕೃತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಮತ್ತೊಂದು ಮಹತ್ವದ ರಾಜಕೀಯ ನಡೆ ಇಟ್ಟಿದ್ದಾರೆ. ರಾಜೀನಾಮೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಅವರು ತಮ್ಮ ಆಪ್ತರೊಂದಿಗೆ ದಿಢೀರನೆ ದೇಶದ ರಾಜಧಾನಿ ಹೊಸದಿಲ್ಲಿಗೆ ಪ್ರಯಾಣ ಬೆಳೆಸಿದರು. ಬೆಂಗಳೂರಿನ ಎಚ್‌ಎಎಲ್ (HAL) ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹೊಸದಿಲ್ಲಿಗೆ ತೆರಳಲಿದ್ದು ಇಂದು ಸಂಜೆ 7:30ರ ಸುಮಾರಿಗೆ ದೆಹಲಿ ತಲುಪಲಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲೇ ಸಿದ್ದರಾಮಯ್ಯ ಅವರು ವಾಸ್ತವ್ಯ ಹೂಡಲಿದ್ದು, ನಾಳೆ ಬೆಳ್ಳಂಬೆಳಗ್ಗೆಯಿಂದಲೇ ಹೈಕಮಾಂಡ್ ನಾಯಕರೊಂದಿಗೆ ಮುಖ್ಯ ಸಭೆಗಳನ್ನು ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಹೊಸ ಸಿಎಂ, ಹೊಸ ಸಂಪುಟ ಹಾಗೂ ನೂತನ ಕೆಪಿಸಿಸಿ ಅಧ್ಯಕ್ಷರ ಆಯ್ಕೆ !
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ಎಳ್ಳಷ್ಟೂ ಕಡಿಮೆಯಾಗಿಲ್ಲ ಎಂಬುದಕ್ಕೆ ಈ ದೆಹಲಿ ಪ್ರವಾಸವೇ ಸಾಕ್ಷಿಯಾಗಿದೆ. ಹೊಸದಿಲ್ಲಿಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹೈಕಮಾಂಡ್‌ನ ಪ್ರಮುಖ ನಾಯಕರೊಂದಿಗೆ ಸಿದ್ದರಾಮಯ್ಯ ಅವರು ಸುದೀರ್ಘ ಸಮಾಲೋಚನೆ ನಡೆಸಲಿದ್ದಾರೆ.
ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರ ಅಧಿಕೃತ ಪಟ್ಟಾಭಿಷೇಕ, ಹೊಸ ಸಚಿವ ಸಂಪುಟದ ರಚನೆ (ಯಾರಿಗೆ ಮಂತ್ರಿ ಸ್ಥಾನ ನೀಡಬೇಕು, ಯಾರನ್ನು ಕೈಬಿಡಬೇಕು) ಹಾಗೂ ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಎಂಬ ಪ್ರಮುಖ ವಿಚಾರಗಳ ಕುರಿತು ಹೈಕಮಾಂಡ್‌ಗೆ ಮಹತ್ವದ ಸಲಹೆಗಳನ್ನು ನೀಡಲಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ನಾಯಕರೊಂದಿಗಿನ ಎಲ್ಲಾ ಮಹತ್ವದ ಚರ್ಚೆಗಳನ್ನು ಮುಗಿಸಿಕೊಂಡು ಸಿದ್ದರಾಮಯ್ಯ ಅವರು ಶುಕ್ರವಾರ (ಮೇ 29) ಸಂಜೆ ಅಥವಾ ಶನಿವಾರ (ಮೇ 30) ಬೆಳಿಗ್ಗೆ ಬೆಂಗಳೂರಿಗೆ ಹಿಂದಿರುಗುವ ಸಾಧ್ಯತೆಗಳಿವೆ. ಸಿದ್ದರಾಮಯ್ಯನವರ ಈ ದಿಢೀರ್ ದೆಹಲಿ ದಂಡಯಾತ್ರೆ ರಾಜ್ಯ ರಾಜಕಾರಣದಲ್ಲಿ ಹಾಗೂ ವಿಶೇಷವಾಗಿ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಭಾರಿ ಕುತೂಹಲ ಮತ್ತು ನಡುಕ ಹುಟ್ಟಿಸಿದೆ.
#FreedomTV #Siddaramaiah #SiddaramaiahDelhiVisit #RahulGandhi #MallikarjunKharge #KCVenugopal #KarnatakaPolitics #NextCMKarnataka #DKShivakumar #KPCCPresident #CabinetFormation #HALAirport #DelhiPolitics #BreakingNewsKarnataka #ಕನ್ನಡಸುದ್ದಿ #ಸಿದ್ದರಾಮಯ್ಯದೆಹಲಿಪ್ರವಾಸ




