Top Newsಜಿಲ್ಲೆಸುದ್ದಿ

ಆರ್‌ಟಿಓ ‘ಫಿಟ್ನೆಸ್’ ಫೇಕ್.. ಅಧಿಕಾರಿಗಳು ಸಖತ್ ವೀಕ್!

ಬೆಂಗಳೂರು : ಕರ್ನಾಟಕ ಸಾರಿಗೆ ಇಲಾಖೆಯ ಇತಿಹಾಸದಲ್ಲೇ ಅತ್ಯಂತ ಕರಾಳ ಎನ್ನಬಹುದಾದ ‘ಮಹಾ’ ಭ್ರಷ್ಟಾಚಾರದ ಹಗರಣವೊಂದು ಬೆಂಗಳೂರಿನಲ್ಲಿ ಬಯಲಾಗಿದೆ. ಬೆಂಗಳೂರು ಕೇಂದ್ರ ಆರ್‌ಟಿಓ ಅಧಿಕಾರಿಗಳು ಹೊರರಾಜ್ಯದ ವಾಹನ ಮಾಲೀಕರೊಂದಿಗೆ ಕೈಜೋಡಿಸಿ ನಡೆಸುತ್ತಿದ್ದ ಈ ಹಗಲು ದರೋಡೆಯು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. 2025-26ರ ಸಾಲಿನಲ್ಲಿ ನಡೆದ ಈ ಬೃಹತ್ ಲೂಟಿಯಲ್ಲಿ ಸಾರಿಗೆ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಲಂಚದ ಅಮಲಿನಲ್ಲಿ ಸಾರಿಗೆ ಇಲಾಖೆಯ ಪವಿತ್ರತೆಯನ್ನು ಹಾಳುಗೆಡವಲಾಗಿದೆ.

ಈ ವ್ಯವಸ್ಥಿತ ಅಕ್ರಮದ ಅಡಿಯಲ್ಲಿ ಕಣ್ಣೆದುರು ವಾಹನಗಳೇ ಇಲ್ಲದಿದ್ದರೂ ಸಹ ಸಾವಿರಾರು ಫಿಟ್ನೆಸ್ ಸರ್ಟಿಫಿಕೇಟ್‌ಗಳನ್ನು ಅಕ್ರಮವಾಗಿ ಹಂಚಲಾಗಿದೆ. ಯಾವುದೇ ರೀತಿಯ ತಾಂತ್ರಿಕ ತಪಾಸಣೆ ಅಥವಾ ಭೌತಿಕ ಚೆಕ್ಕಿಂಗ್ ನಡೆಸದೆ ಕೇವಲ ದಾಖಲೆಗಳ ಮೇಲೆ ಎಫ್‌ಸಿ ನೀಡುವ ಮೂಲಕ ಭ್ರಷ್ಟ ಅಧಿಕಾರಿಗಳ ತಂಡವು ಭರ್ಜರಿ ‘ಗೋಲ್‌ಮಾಲ್’ ನಡೆಸಿದೆ. ಬರೋಬ್ಬರಿ 10,210 ವಾಹನಗಳಿಗೆ ಅಕ್ರಮವಾಗಿ ಪ್ರಮಾಣಪತ್ರ ನೀಡಲಾಗಿದ್ದು, ಇದರಲ್ಲಿ ಗುಜರಾತ್ ಮೂಲದ ವಾಹನಗಳಿಗೂ ಬೆಂಗಳೂರಿನಲ್ಲೇ ಕುಳಿತು ಸರ್ಟಿಫಿಕೇಟ್ ನೀಡಿರುವುದು ಹಗರಣದ ವ್ಯಾಪ್ತಿಯನ್ನು ಎತ್ತಿ ತೋರಿಸುತ್ತಿದೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತೂಗುಗತ್ತಿ ಅಧಿಕಾರಿಗಳ ಮೇಲೆ ನೇತಾಡುತ್ತಿದ್ದು, ನಿವೃತ್ತ ಇನ್ಸ್‌ಪೆಕ್ಟರ್ ನಿಸಾರ್ ಅಹಮದ್ ಸೇರಿದಂತೆ ಹಲವು ಭ್ರಷ್ಟ ಅಧಿಕಾರಿಗಳಿಗೆ ಜೈಲೂಟ ಫಿಕ್ಸ್ ಎಂಬ ಮುನ್ಸೂಚನೆ ಸಿಕ್ಕಿದೆ. ಇಲಾಖೆಯ ಘನತೆಗೆ ಮಸಿ ಬಳಿದಿರುವ ಈ ಅಧಿಕಾರಿಗಳು ಮತ್ತು ಅವರಿಗೆ ಸಾಥ್ ನೀಡಿದ ಅಕ್ರಮ ವಾಹನ ಮಾಲೀಕರ ವಿರುದ್ಧ ಈಗ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಸಾರಿಗೆ ಇಲಾಖೆಯಲ್ಲಿ ನಡೆದ ಈ ಅತಿದೊಡ್ಡ ದರೋಡೆಯ ಕುರಿತು ತನಿಖೆ ತೀವ್ರಗೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸರ್ಕಾರ ಮುಂದಾಗಿದೆ.

Comments (0)

Your email address will not be published. Required fields are marked *

Back to top button