Top Newsದೇಶ/ವಿದೇಶಸುದ್ದಿ

ಪಾಕ್-ಅಫ್ಘಾನ್ ವೈಮಾನಿಕ ಸಮರ; ತಾಲಿಬಾನ್ ಏರ್‌ಸ್ಟ್ರೈಕ್‌

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಗಡಿ ಸಂಘರ್ಷ ತಾರಕಕ್ಕೇರಿದ್ದು, ಪಾಕಿಸ್ತಾನ ನಡೆಸಿದ ಏರ್‌ಸ್ಟ್ರೈಕ್‌ಗೆ ಪ್ರತಿಯಾಗಿ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವೂ ವೈಮಾನಿಕ ದಾಳಿ ನಡೆಸಿ ತಿರುಗೇಟು ನೀಡಿದೆ. ಇಸ್ಲಾಮಾಬಾದ್‌ನ ಫೈಜಾಬಾದ್ ಬಳಿಯ ಮಿಲಿಟರಿ ಶಿಬಿರ ಹಾಗೂ ನೌಶೇರಾದ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡು ಸಂಘಟಿತ ದಾಳಿ ನಡೆಸಲಾಗಿದೆ ಎಂದು ತಾಲಿಬಾನ್ ರಕ್ಷಣಾ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ.

ಈ ಸಂಘರ್ಷಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳು ಪರಸ್ಪರ ಆರೋಪಗಳನ್ನು ಮಾಡಿಕೊಂಡಿವೆ. ತಾಲಿಬಾನ್ ಆಡಳಿತವು ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ ಎಂದು ಪಾಕಿಸ್ತಾನ ದೂರಿದ್ದರೆ, ಪಾಕಿಸ್ತಾನದ ವಾಯುಪಡೆಯು ಕಾಬೂಲ್ ಮತ್ತು ಕಂದಹಾರ್ ಮೇಲೆ ದಾಳಿ ನಡೆಸಿ 13ಕ್ಕೂ ಹೆಚ್ಚು ಅಮಾಯಕರನ್ನು ಹತ್ಯೆ ಮಾಡಿದೆ ಎಂದು ಅಫ್ಘಾನಿಸ್ತಾನ ಆಕ್ರೋಶ ವ್ಯಕ್ತಪಡಿಸಿದೆ. ತಾಲಿಬಾನ್‌ ವಿರುದ್ಧದ ಹೋರಾಟಕ್ಕೆ ಪಾಕಿಸ್ತಾನ ‘ಆಪರೇಷನ್ ಗಜಬ್ ಲಿಲ್ ಹಕ್’ ಎಂಬ ಹೆಸರಿನಡಿ ಕಾರ್ಯಾಚರಣೆ ನಡೆಸುತ್ತಿದೆ.

ತಾಲಿಬಾನ್ ಪಡೆಗಳು ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿವೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿದೆ. ಈ ಸುದ್ದಿಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಯುದ್ಧ ವಿಮಾನದ ಧ್ವಂಸಗೊಂಡ ಫೋಟೋಗಳು ಜನರ ಗಮನ ಸೆಳೆದಿವೆ. ಆದರೆ, ಈ ಬಗ್ಗೆ ತನಿಖೆ ನಡೆಸಿದಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆ ಫೋಟೋಗಳು AI ಮೂಲಕ ಸೃಷ್ಟಿಸಲಾದ ನಕಲಿ ಚಿತ್ರಗಳು ಎಂಬುದು ದೃಢಪಟ್ಟಿದೆ.

ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆ ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಬೆಳವಣಿಗೆಗಳು ಆತಂಕಕ್ಕೆ ಕಾರಣವಾಗಿವೆ. ಎರಡೂ ದೇಶಗಳ ನಡುವಿನ ಈ ನೇರ ಮಿಲಿಟರಿ ಸಂಘರ್ಷವು ದಕ್ಷಿಣ ಏಷ್ಯಾದ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.

Comments (0)

Your email address will not be published. Required fields are marked *

Back to top button