Top Newsಜಿಲ್ಲೆಜ್ಯೋತಿಷ್ಯಸುದ್ದಿ

ಬೆಂಗಳೂರು ದೇಗುಲಗಳ ದರ್ಶನ ಸಮಯದಲ್ಲಿ ಭಾರಿ ಬದಲಾವಣೆ

ಬೆಂಗಳೂರು : ಮಾರ್ಚ್ 3ರ ಮಂಗಳವಾರದಂದು ಸಂಭವಿಸಲಿರುವ ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನೆಲೆ ಬೆಂಗಳೂರಿನ ಹಲವು ಪ್ರಸಿದ್ಧ ದೇವಾಲಯಗಳ ದರ್ಶನ ಹಾಗೂ ಪೂಜಾ ಸಮಯದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಈ ದಿನದಂದು ಯುಗಾದಿಗೂ ಮುನ್ನವೇ ಗ್ರಹಣದ ಛಾಯೆ ಆವರಿಸುತ್ತಿದ್ದು, ಗ್ರಹಣ ಆರಂಭಕ್ಕೂ ಆರು ಗಂಟೆ ಮುಂಚಿತವಾಗಿಯೇ ಸೂತಕದ ಕಾಲ ಪ್ರಾರಂಭವಾಗಲಿದೆ.

ಬನಶಂಕರಿ ದೇವಸ್ಥಾನದಲ್ಲಿ ಗ್ರಹಣ ದೋಷದ ಕಾರಣದಿಂದಾಗಿ ವಿಶೇಷ ಪೂಜೆಗಳನ್ನು ರದ್ದುಗೊಳಿಸಲಾಗಿದ್ದು, ಸಂಜೆ 7 ಗಂಟೆಯ ನಂತರವಷ್ಟೇ ನಿತ್ಯ ಪೂಜೆಗಳು ಎಂದಿನಂತೆ ಜರುಗಲಿವೆ. ಇನ್ನು ಐತಿಹಾಸಿಕ ಗವಿಗಂಗಾಧರೇಶ್ವರ ದೇವಾಲಯವು ಬೆಳಿಗ್ಗೆ 9 ಗಂಟೆಗೆ ಸಾರ್ವಜನಿಕ ದರ್ಶನಕ್ಕೆ ಸ್ಥಗಿತಗೊಳ್ಳಲಿದ್ದು, ಪುನಃ ಸಂಜೆ 7:45ರ ನಂತರವಷ್ಟೇ ಬಾಗಿಲು ತೆರೆಯಲಿದೆ. ಗ್ರಹಣದ ನಂತರ ಮಾರ್ಚ್ 4ರಂದು ಲೋಕಕಲ್ಯಾಣಕ್ಕಾಗಿ ದೇಗುಲದಲ್ಲಿ ವಿಶೇಷ ಗ್ರಹಣ ಶಾಂತಿ ಹೋಮವನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅರ್ಚಕರು ತಿಳಿಸಿದ್ದಾರೆ.

ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಾಲಯವು ಬೆಳಿಗ್ಗೆ 11 ಗಂಟೆಗೆ ಮುಚ್ಚಲಿದ್ದು, ರಾತ್ರಿ 7:30ಕ್ಕೆ ಪುನಃ ದರ್ಶನಕ್ಕೆ ಮುಕ್ತವಾಗಲಿದೆ. ಗ್ರಹಣದ ನಂತರ ಮಾಡಬೇಕಾದ ಶಾಂತಿ ಪೂಜೆಗಳ ಬಗ್ಗೆ ದೇಗುಲದ ಮಂಡಳಿಯು ಈಗಾಗಲೇ ಭಕ್ತರಿಗೆ ಸೂಚನೆ ನೀಡಿದ್ದು, ಅಕ್ಕಿ ಹಾಗೂ ಹುರುಳಿಕಾಳು ದಾನ ನೀಡುವಂತೆ ತಿಳಿಸಿದೆ. ಅದರಂತೆ ದೊಡ್ಡ ಗಣೇಶ ದೇವಾಲಯದಲ್ಲೂ ಸಂಜೆ 5:30ರ ಪೂಜಾ ಸಮಯವನ್ನು ಬದಲಿಸಿ, ಗ್ರಹಣ ಮೋಕ್ಷವಾದ ನಂತರ ಅಂದರೆ ರಾತ್ರಿ 7:45ಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ನಗರದ ಬಂಡೆ ಮಹಾಕಾಳಿ ದೇವಾಲಯವು ಒಂದು ವಿಶಿಷ್ಟ ಪದ್ಧತಿಯನ್ನು ಪಾಲಿಸುತ್ತಿದ್ದು, ಗ್ರಹಣದ ಸಮಯದಲ್ಲಿ ದೇಗುಲವನ್ನು ಮುಚ್ಚುವ ಬದಲು ವಿಶೇಷ ಹೋಮ ಮತ್ತು ಪೂಜೆಗಳನ್ನು ನಡೆಸಲು ನಿರ್ಧರಿಸಿದೆ. ಗ್ರಹಣ ಕಾಲದಲ್ಲಿ ದೇವಿಗೆ ತುಪ್ಪದ ಲೇಪನ ಮಾಡಲಾಗುವುದು ಮತ್ತು ಚಂದ್ರಶಾಂತಿ ಹೋಮದಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ಮುಕ್ತ ಅವಕಾಶ ನೀಡಲಾಗುವುದು ಎಂದು ದೇವಸ್ಥಾನದ ಮಂಡಳಿ ತಿಳಿಸಿದೆ. ಮರುದಿನ ದೇವಿಗೆ ಕುಂಭಸ್ನಾನದ ಮೂಲಕ ಶುದ್ಧೀಕರಣ ಕಾರ್ಯ ಜರುಗಲಿದೆ.

Comments (0)

Your email address will not be published. Required fields are marked *

Back to top button