
ಚಿತ್ರದುರ್ಗ: ಹೊಳಲ್ಕೆರೆಯಲ್ಲಿ ಬಿಎಎಂಎಸ್ ವಿದ್ಯಾರ್ಥಿನಿ ನಿಖಿತಾ (23) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ಬರೆದಿರುವ ಡೆತ್ನೋಟ್ ಈಗ ಸ್ಫೋಟಕ ಮಾಹಿತಿಯನ್ನು ಹೊರಹಾಕಿದೆ. ತನ್ನ ಪ್ರಾಧ್ಯಾಪಕ ಡಾ. ರಾಜು ಅವರ ಜೊತೆ ಅಕ್ರಮ ಸಂಬಂಧವಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ, ಅಪಪ್ರಚಾರ ಮಾಡಿದ್ದರಿಂದ ತಾನು ತೀವ್ರವಾಗಿ ನೊಂದಿರುವುದಾಗಿ ನಿಖಿತಾ ಅದರಲ್ಲಿ ಉಲ್ಲೇಖಿಸಿದ್ದಾರೆ. ಪ್ರಾಧ್ಯಾಪಕರು ತನಗೆ ತಂದೆ ಅಥವಾ ಅಣ್ಣನ ಸಮಾನ ಎಂದು ಸ್ಪಷ್ಟಪಡಿಸಿರುವ ಆಕೆ, ಕೇವಲ ಪರೀಕ್ಷೆ ಮತ್ತು ಶೈಕ್ಷಣಿಕ ಮಾರ್ಗದರ್ಶನಕ್ಕಾಗಿ ಅವರ ಬಳಿ ಹೋಗುತ್ತಿದ್ದೆ ಎಂದು ದೇವರ ಮೇಲೆ ಆಣೆ ಮಾಡಿ ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ತನ್ನ ಕೆಟ್ಟ ಸಹಪಾಠಿಗಳು ಮತ್ತು ಪ್ರಾಧ್ಯಾಪಕರ ಪತ್ನಿ ಸೇರಿ ತನ್ನ ಚಾರಿತ್ರ್ಯಕ್ಕೆ ಧಕ್ಕೆ ತಂದಿರುವುದು ಈ ದುರಂತ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ನಿಖಿತಾ ತನ್ನ ಡೆತ್ನೋಟ್ನಲ್ಲಿ ಸಹಪಾಠಿಗಳಾದ ಅನುಷಾ, ರಕ್ಷಾ, ಚಿನ್ಮಯಿ, ಗ್ರೀಷ್ಮಾ ಮತ್ತು ಸಾಗರ್ ಎಂಬುವವರ ಹೆಸರನ್ನು ಪ್ರಸ್ತಾಪಿಸಿದ್ದು, ಇಂತಹ ಗುಣದ ಸ್ನೇಹಿತರನ್ನು ನಾನು ಜೀವನದಲ್ಲೇ ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರಾಧ್ಯಾಪಕ ರಾಜು ಅವರ ಪತ್ನಿ ನಿಶಾ ಅವರು ಕೂಡ ತನ್ನ ಮೇಲೆ ಅನುಮಾನ ಪಟ್ಟು ಅವಮಾನ ಮಾಡಿದ್ದು ಅತೀವ ನೋವುಂಟು ಮಾಡಿದೆ ಎಂದು ತಿಳಿಸಿದ್ದಾರೆ. ಮದುವೆಯಾದ ವ್ಯಕ್ತಿಯ ಜೊತೆ ಸಂಬಂಧ ಕಲ್ಪಿಸಿ ನಡೆಸಿದ ಅಪಪ್ರಚಾರವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿರುವ ಆಕೆ, ತನ್ನ ಹೆತ್ತವರಲ್ಲಿ ಕ್ಷಮೆ ಕೇಳಿದ್ದಾರೆ. ಜೊತೆಗೆ ತನ್ನ ತಂಗಿ ನಿಧಿಗೆ ಜೀವನದಲ್ಲಿ ಯಾರನ್ನೂ ಅತಿಯಾಗಿ ನಂಬಬೇಡ ಎಂದು ಕಿವಿಮಾತು ಹೇಳುವ ಮೂಲಕ ತನ್ನ ನೋವನ್ನು ತೋಡಿಕೊಂಡಿದ್ದಾರೆ.
ಈಗಾಗಲೇ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಡೆತ್ನೋಟ್ನಲ್ಲಿ ಹೆಸರಿಸಲಾದ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪ್ರಾಧ್ಯಾಪಕ ರಾಜು ಅವರು ನಿಜಕ್ಕೂ ಒಳ್ಳೆಯವರು ಮತ್ತು ಅವರ ಮೇಲೆ ಯಾರೂ ಅನಗತ್ಯ ಆರೋಪ ಮಾಡಬಾರದು ಎಂದು ನಿಖಿತಾ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ. ಸಮಾಜದಲ್ಲಿ ಮತ್ತು ಕಾಲೇಜಿನಲ್ಲಿ ತನ್ನ ಬಗ್ಗೆ ಹಬ್ಬಿಸಲಾದ ಸುಳ್ಳು ಸುದ್ಧಿಗಳಿಂದ ನೊಂದ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲು ಸಾವಿನ ಹಾದಿ ಹಿಡಿದಿರುವುದು ಇಡೀ ಜಿಲ್ಲೆಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಪೊಲೀಸರು ಈಗ ಈ ಡೆತ್ನೋಟ್ ಆಧಾರದ ಮೇಲೆ ತನಿಖೆಯನ್ನು ಚುರುಕುಗೊಳಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.




