ಗಣಿನಾಡಲ್ಲಿ ರಣಬಿಸಿಲಿನ ಅಬ್ಬರ, ಬಿಸಿಲ ಧಗೆಯಿಂದ ರಕ್ಷಿಸಿಕೊಳ್ಳಲು ವೈದ್ಯರ ಸಲಹೆ!

ಬಳ್ಳಾರಿ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗಣಿನಾಡು ಈಗ ಅಕ್ಷರಶಃ ರಣಬಿಸಿಲಿಗೆ ಕಾದ ಕೆಂಡದಂತಾಗಿದೆ. ಜಿಲ್ಲೆಯಲ್ಲಿ ಉಷ್ಣಾಂಶವು ಈಗಾಗಲೇ 44 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಸೂರ್ಯನ ಪ್ರಖರತೆಗೆ ಜನತೆ ತತ್ತರಿಸಿ ಹೋಗಿದ್ದಾರೆ. ತೀವ್ರವಾದ ಶಾಖದ ಅಲೆಗಳ ಪರಿಣಾಮವಾಗಿ ಸಾರ್ವಜನಿಕರಲ್ಲಿ ಅತಿಯಾದ ಸುಸ್ತು, ವಾಂತಿ ಮತ್ತು ಡಿಹೈಡ್ರೇಶನ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಬಿಸಿಲಿನ ಬೇಗೆ ತಾಳಲಾರದೆ ಜನರು ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದು, ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳು ಜಿಲ್ಲಾಡಳಿತವನ್ನು ಚಿಂತೆಗೀಡು ಮಾಡಿವೆ.

ಬಿಸಿಲಿನ ತಾಪದಿಂದ ಉಂಟಾಗುವ ಹೀಟ್ ಸ್ಟ್ರೋಕ್ ಅಥವಾ ಬಿಸಿಲ ಮೈ ಏರಿಕೆ ಸಮಸ್ಯೆಗೆ ತುತ್ತಾಗುವವರಿಗೆ ತಕ್ಷಣದ ಚಿಕಿತ್ಸೆ ನೀಡಲು ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾದ ‘ಹೀಟ್ ಸ್ಟ್ರೋಕ್ ವಾರ್ಡ್’ ಅನ್ನು ತೆರೆಯಲಾಗಿದ್ದು, ಇಲ್ಲಿ ಸುಮಾರು 8 ರಿಂದ 10 ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಈ ವಿಶೇಷ ವಾರ್ಡ್ನಲ್ಲಿ ರೋಗಿಗಳಿಗೆ ತಂಪು ವಾತಾವರಣ ಕಲ್ಪಿಸಲು ಎಸಿ ಮತ್ತು ಫ್ಯಾನ್ಗಳ ವ್ಯವಸ್ಥೆಯನ್ನು ಮಾಡಲಾಗಿದ್ದು, ತುರ್ತು ಚಿಕಿತ್ಸೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.
ಜಿಲ್ಲಾಸ್ಪತ್ರೆಯ ಈ ವಿಶೇಷ ವಾರ್ಡ್ನಲ್ಲಿ ಚಿಕಿತ್ಸೆಗೆ ಬರುವವರಿಗೆ ನಿರಂತರವಾಗಿ ಕುಡಿಯುವ ನೀರು ಮತ್ತು ಒಆರ್ಎಸ್ (ORS) ದ್ರಾವಣದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಿಸಿಲಿನಿಂದಾಗಿ ಸುಸ್ತು ಮತ್ತು ವಾಂತಿ ಕಾಣಿಸಿಕೊಂಡ ತಕ್ಷಣ ಸಾರ್ವಜನಿಕರು ನಿರ್ಲಕ್ಷ್ಯ ಮಾಡದೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಗಣಿನಾಡಿನ ಜನತೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸದಾ ಜಾಗರೂಕರಾಗಿರಬೇಕು ಮತ್ತು ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳುವ ಮೂಲಕ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕೆಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.