“ಇದು ಬ್ಯಾಂಕಿಂಗ್ ಅಲ್ಲ, ವೈಟ್ ಕಾಲರ್ ದರೋಡೆ”: Bandhan Bank ವಿರುದ್ಧ ಗಂಭೀರ ಆರೋಪ

ಬೆಂಗಳೂರು, ಮೇ 13: ಕೊರೊನಾ ಸಂಕಷ್ಟದ ಸಮಯದಲ್ಲಿ ಜನರಿಗೆ ನೆರವಾಗಬೇಕಿದ್ದ ಬ್ಯಾಂಕ್‌ಗಳೇ ಇದೀಗ ಗ್ರಾಹಕರ ಸಂಕಷ್ಟವನ್ನು ಬಂಡವಾಳ ಮಾಡಿಕೊಂಡು ಲಾಭದ ಲೆಕ್ಕ ಹಾಕಿದವೆಯೇ ಎಂಬ ಗಂಭೀರ ಪ್ರಶ್ನೆ ಉದ್ಭವಿಸಿದೆ. ಖಾಸಗಿ ಬ್ಯಾಂಕಿಂಗ್ ಕ್ಷೇತ್ರದ ವಿರುದ್ಧ ಆಕ್ರೋಶ ಹೆಚ್ಚುತ್ತಿರುವ ನಡುವೆ, Bandhan Bank ವಿರುದ್ಧ ಭಾರೀ ಆರೋಪಗಳು ಕೇಳಿಬಂದಿವೆ.
ಕೊವಿಡ್ ಅವಧಿಯಲ್ಲಿ ಮೊರಟೋರಿಯಂ ಪಡೆದ ಗ್ರಾಹಕರ ಸಾಲ ಖಾತೆಗಳಲ್ಲಿ ಲೆಕ್ಕಾಚಾರದ ಗೋಲ್‌ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಕೇವಲ ಐದು ತಿಂಗಳ ಬಾಕಿಗೆ 12 ತಿಂಗಳ ಅವಧಿ ವಿಸ್ತರಿಸಿ, ಅದರ ಮೇಲೂ ಚಕ್ರಬಡ್ಡಿ ವಿಧಿಸಲಾಗಿದೆ ಎಂದು ಹಲವರು ದೂರಿದ್ದಾರೆ. ಗ್ರಾಹಕರು ತಿಂಗಳಾವರಿ ಸ್ಟೇಟ್‌ಮೆಂಟ್ ಕೇಳಿದಾಗ, ವಾರ್ಷಿಕ ಸ್ಟೇಟ್‌ಮೆಂಟ್ ನೀಡಿ ಗೊಂದಲ ಸೃಷ್ಟಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಸಾಲ ಮರುಪಾವತಿ ದಾಖಲೆಗಳು ಮತ್ತು ಲೋನ್ ಸ್ಟೇಟ್‌ಮೆಂಟ್‌ಗಳ ನಡುವೆ ದೊಡ್ಡ ಮಟ್ಟದ ವ್ಯತ್ಯಾಸ ಕಂಡುಬಂದಿದ್ದು, ದಾಖಲೆಗಳಲ್ಲಿ ತಿದ್ದುಪಡಿ ಅಥವಾ ಫೋರ್ಜರಿ ನಡೆದಿದೆ ಎಂಬ ಅನುಮಾನ ಮೂಡಿದೆ. ಬ್ಯಾಂಕ್ ನೀಡಿದ ಕೆಲವು ದಾಖಲೆಗಳಲ್ಲಿ ಸರಿಯಾದ ಬ್ಯಾಂಕಿಂಗ್ ವಿವರಗಳೇ ಇಲ್ಲ ಎಂಬ ಗಂಭೀರ ಆರೋಪ ಕೂಡ ಕೇಳಿಬಂದಿದೆ.
ಇನ್ನಷ್ಟು ಆತಂಕಕಾರಿ ಸಂಗತಿಯೆಂದರೆ, ಗ್ರಾಹಕರ ಖಾತೆ ಮಾಹಿತಿಯನ್ನು ಬ್ಯಾಂಕ್‌ನ ಬ್ಯಾಕ್‌ಎಂಡ್ ಸಿಸ್ಟಮ್‌ನಲ್ಲಿ ಮ್ಯಾನುಯಲ್ ಆಗಿ ತಿದ್ದುಪಡಿ ಮಾಡಲಾಗಿದೆ ಎಂದು Reserve Bank of India ತನ್ನ ವರದಿಯಲ್ಲಿ ಉಲ್ಲೇಖಿಸಿದೆ ಎನ್ನಲಾಗಿದೆ. ಆಡಿಟ್ ಟ್ರೈಲ್ ಲಾಗ್ ಮಾಹಿತಿಯನ್ನೂ ಮರೆಮಾಚಲಾಗಿದೆ ಎಂಬ ಆರೋಪ ಇದೀಗ ಪ್ರಕರಣಕ್ಕೆ ಮತ್ತಷ್ಟು ತೀವ್ರತೆ ನೀಡಿದೆ.

ಬ್ಯಾಂಕಿಂಗ್ ನಿಯಮ ಉಲ್ಲಂಘನೆ ಆರೋಪ ಹಿನ್ನೆಲೆಯಲ್ಲಿ Reserve Bank of India ಈಗಾಗಲೇ ಬ್ಯಾಂಕ್‌ಗೆ 43 ಲಕ್ಷ ರೂಪಾಯಿ ದಂಡ ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ NCR ಕೂಡ ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ.
ಫೆಬ್ರವರಿ 2025ರಿಂದ ಸೆಪ್ಟೆಂಬರ್ 2025ರವರೆಗೆ ರಾಜ್ಯದಾದ್ಯಂತ ಕಂಜ್ಯೂಮರ್ ಫೋರಂಗಳಲ್ಲಿ ಬ್ಯಾಂಕಿಂಗ್ ವಂಚನೆ ಮತ್ತು ಲೆಕ್ಕಾಚಾರ ಗೊಂದಲಗಳಿಗೆ ಸಂಬಂಧಿಸಿದಂತೆ 5,313 ಪ್ರಕರಣಗಳು ದಾಖಲಾಗಿರುವುದು ಗ್ರಾಹಕರ ಆತಂಕ ಹೆಚ್ಚಿಸಿದೆ.
ಸಂತ್ರಸ್ತರು ಈ ಪ್ರಕರಣದ ಸಂಪೂರ್ಣ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದು, “ಜನರು ಕಷ್ಟಪಟ್ಟು ದುಡಿದ ಹಣವನ್ನೇ ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿ ಇಡಲು ಸಾಧ್ಯವಾಗದ ಪರಿಸ್ಥಿತಿ ಬಂದರೆ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ವಿಶ್ವಾಸವೇ ಕುಸಿಯುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ, ಸತ್ಯಾಂಶಗಳನ್ನು ಬಹಿರಂಗಪಡಿಸಬೇಕು ಎಂಬ ಒತ್ತಾಯ ಜೋರಾಗಿದೆ.




