ಸಿಎಂ ಎದುರೇ ಷಡಾಕ್ಷರಿ ಬಲ ಪ್ರದರ್ಶನ ಫ್ಲ್ಯಾಪ್ ಶೋ.!

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಮಾವೇಶ ಮುಗಿದಿದೆ. ರಾಜಧಾನಿ ಜನರಿಗೆ ಟ್ರಾಫಿಕ್ ಸಮಸ್ಯೆ ಇಟ್ಟು, ನಡೆಸಿದ ಶೋ ಒಂದು ರೀತಿ ಮೆಗಾ ಫ್ಲ್ಯಾಪ್ ಆಗಿದೆ. ಹಿಡನ್ ಅಜೆಂಡಾಗಳನ್ನ ಇಟ್ಕೊಂಡು ಆಟ ಆಡೋಕೆ ಹೋಗಿದ್ದ ಷಡಾಕ್ಷರಿ ಮುಖ ಸೆಪ್ಪೆಯಾಗಿದೆ.
ಹೌದು..ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ 103ರ ಸಂಭ್ರಮದ ಹಿಂದೆ ಸರ್ಕಾರಿ ನೌಕರರ ಲೀಡರ್ ವೇಷ ಹಾಕ್ಕೊಂಡು ರಾಜಕೀಯದ ದಾಳ ಉರುಳಿಸೋಕೆ ಹೊರಟಿದ್ದ ಷಡಾಕ್ಷರಿ ಯೋಜನೆಗಳ ಲೆಕ್ಕಚಾರವನ್ನ ಸಿಎಂ ಸಿದ್ದರಾಮಯ್ಯ ತಲೆಕೆಳಗೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರಿಗೆ ಆಹ್ವಾನ ನೀಡಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಜನ ಬಲ ನೋಡಿ ಸಿಎಂ ಮನಸೋತು, ನಮ್ಮ ನಿರೀಕ್ಷೆಗಳಿಗೆ ಸಾಥ್ ಕೊಡ್ತಾರೆ ಅಂದುಕೊಳ್ಳಲಾಗಿತ್ತು. ಆದ್ರೆ ಅದು ಉಲ್ಟಾ ಹೊಡೆದಿದೆ.
ಏಳನೇ ವೇತನ ಆಯೋಗ ರಚನೆಯಾಗಿದೆ, 6ನೇ ವೇತನ ಆಯೋಗ ವರದಿ ಕೊಟ್ಟಾಗ ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿತ್ತು. 5ನೇ ಆಯೋಗದ ವರದಿ ಜಾರಿಗೆ ಬಂದಾಗ ಜೆ ಹೆಚ್ ಪಟೇಲ್ ಮುಖ್ಯಮಂತ್ರಿ ಆಗಿದ್ದರು. ಸಿದ್ದರಾಮಯ್ಯ ಹಣಕಾಸು ಸಚಿವ ಮತ್ತು ಡಿಸಿಎಂ ಆಗಿದ್ದರು. 6ನೇ ವೇತನ ಆಯೋಗವನ್ನ ಸಿದ್ದರಾಮಯ್ಯನವರೇ ಜಾರಿ ಮಾಡಿದ್ದರು. ಈಗ ಏಳನೇ ವೇತನ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ ವರದಿ ನೀಡಲು ಸಮಯ ಕೇಳಿದ್ದಾರೆ. ಮಾರ್ಚ್ 15ರವರೆಗೂ ಸಮಯ ಕೊಟ್ಟಿದ್ದೇವೆ, ವರದಿ ಬಂದ ನಂತ್ರ ತೀರ್ಮಾನ ಕೈಗೊಳ್ಳೋದಾಗಿ ಸಿಎಂ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.
ಅದ್ಯಾವಾಗ ಸಿಎಂ ಸಿದ್ದರಾಮಯ್ಯ, ಅಡ್ಡಗೋಡೆ ಮೇಲೆ ದೀಪ ಇಟ್ರೋ ಆಗಲೇ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಮುಖಪೆಚ್ಚಾಯ್ತು, ಸರ್ಕಾರ ಸ್ಪಂದಿಸದಿದ್ದರೆ ಮುಂದೆ ರಾಜ್ಯ ಬಂದ್ ಮಾಡೋಣ ಎಂದು ಷಡಾಕ್ಷರಿ ನೌಕರರನ್ನು ಸಮಾಧಾನಪಡಿಸಿದ್ರು.. ಪದೇ ಪದೇ ಕರ್ತವ್ಯ ಬಿಟ್ಟು ಷಡಾಕ್ಷರಿ ಬಣವು ಕೋಟಿಗಟ್ಟಲೇ ವ್ಯಯಿಸಿ ಸಂಭ್ರಮದ ನೆಪದಲ್ಲಿ ಬಲ ಪ್ರದರ್ಶನ ಮಾಡಿಕೊಂಡೇ ಬರುತ್ತಿದೆ. ಇದರ ಹಿಂದೆ ಷಡಾಕ್ಷರಿ ತನ್ನ ಇಮೇಜ್ ಬಿಲ್ಡಪ್ ಮಾಡಿಕೊಳ್ಳಲು ಅಧಿಕಾರಿ ವರ್ಗವನ್ನ ಬಳಸಿಕೊಳ್ಳುತ್ತಿದ್ದಾರೆ ಅನ್ನೋ ಸತ್ಯ ಅಡಗಿದೆ.
ಈ ಹಿಂದೆ ಇದೇ ಸಿದ್ದರಾಮಯ್ಯ ಸರ್ಕಾರ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಷಡಾಕ್ಷರಿಯನ್ನ ಎತ್ತಂಗಡಿ ಮಾಡಿತ್ತು. ಮಾಡೋ ಕೆಲಸ ಬಿಟ್ಟು ಆಡೋ ದಾಸಯ್ಯನ ಹಿಂದೆ ಹೋದ ಎಂಬ ಗಾದೆಯಂತೆ ಪದೇ ಪದೇ ನೌಕರರ ಸಂಘದ ಸಮಾವೇಶ, ಮೀಟಿಂಗ್ ಅನ್ಕೊಂಡು ಅಧಿಕಾರ ದುರ್ಬಳಕೆ ಮಾಡಿದ ಆರೋಪ ಹಾಗೂ 71 ಲಕ್ಷ ನಷ್ಟ ಮಾಡಿದ ಆರೋಪ ಸೇರಿದಂತೆ ಷಡಾಕ್ಷರಿ ವಿರುದ್ಧ ಹಲವು ಆರೋಪಗಳು ಇವೆ. ಇನ್ನು ನೌಕರರ ಸಂಘದಲ್ಲೇ ಹಲವರು ಷಡಾಕ್ಷರಿ ಚಟುವಟಿಕೆಗಳ ವಿರುದ್ಧವೂ ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ.
ಸರ್ಕಾರಿ ನೌಕರರ ಸಂಘವನ್ನ ಮುಂದಿಟ್ಕೊಂಡು ಯಡಿಯೂರಪ್ಪ ಕುಟುಂಬದ ಜೊತೆ ಗುರುತಿಸಿಕೊಂಡಿರುವ ಷಡಾಕ್ಷರಿ ರಾಜಕೀಯ ಪ್ರವೇಶಕ್ಕೆ ವೇದಿಕೆ ರೆಡಿ ಮಾಡಿಕೊಳ್ಳುತ್ತಿದ್ದಾರೆ ಅನ್ನೋದ್ರಲ್ಲಿ ಅನುಮಾನವಿಲ್ಲ..ಸಧ್ಯ ಷಡಾಕ್ಷರಿ ಹಿಡನ್ ಅಜೆಂಡಾಗಳು ಫ್ಲ್ಯಾಪ್ ಆಗಿವೆ.. ವೈಯಕ್ತಿಕ ಇಮೇಜ್ ಹೆಚ್ಚಿಸಿಕೊಳ್ಳಲು ಆಡಳಿತ ಯಂತ್ರವನ್ನ ಬಳಸಿಕೊಳ್ತಿರೋದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.




