ರಾಜ್ಯದಲ್ಲಿ ತೀವ್ರಗೊಂಡ ಕಬ್ಬು ಬೆಳೆಗಾರರ ಕಿಚ್ಚು!
Outrage among sugarcane growers intensifies in the state!

ಬೆಂಗಳೂರು : ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ಇಂದು ಕರೆ ನೀಡಿರುವ ‘ಕರ್ನಾಟಕ ಬಂದ್’ ರಾಜ್ಯಾದ್ಯಂತ ತೀವ್ರಗೊಂಡಿದೆ. ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿ ಟನ್ ಕಬ್ಬಿಗೆ ಕನಿಷ್ಠ 5,500 ರೂ. ಬೆಲೆ ನೀಡಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ. ಪುಣೆ-ಬೆಂಗಳೂರು, ಹುಕ್ಕೇರಿ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಾಜ್ಯದ ವಿವಿಧೆಡೆ ಹೆದ್ದಾರಿಗಳನ್ನು ತಡೆಯಲಾಗಿದ್ದು, ಸಂಚಾರ ಸಂಪೂರ್ಣಸ್ತಂಭನಗೊಂಡಿದೆ. ಇಂದಿನ ಬಂದ್ ಬೆನ್ನಲ್ಲೇ, ನಾಳೆ ‘ಜೈಲು ಭರೋ’ ಚಳವಳಿಗೆ ರೈತ ಮುಖಂಡರು ಸಜ್ಜಾಗಿದ್ದಾರೆ.
ಪಾರಿಶ್ವಾಡ-ಬೆಳಗಾವಿ ಸಂಪರ್ಕಿಸುವ ರಸ್ತೆಯನ್ನು ಬಂದ್ ಮಾಡಲಾಗಿದ್ದು, ರಸ್ತೆ ಮಧ್ಯೆ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ರಾಮೀಣ ಭಾಗದಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳೂ ಬಂದ್ ಆಗಿವೆ. ಹುಕ್ಕೇರಿ ಪಟ್ಟಣದಲ್ಲೂ ರಸ್ತೆ ತಡೆದು ರೈತರು ಉಗ್ರ ಪ್ರತಿಭಟನೆ ನಡೆಸಿದ್ದಾರೆ.
ಹುಕ್ಕೇರಿ-ಬೆಳಗಾವಿ ಮುಖ್ಯ ರಸ್ತೆ ಬಂದ್ ಮಾಡಲಾಗಿದ್ದು, ಈ ಹೋರಾಟಕ್ಕೆ ಹುಕ್ಕೇರಿಯ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಸಾಥ್ ನೀಡಿದ್ದಾರೆ. ರೈತರು ಬೆಳೆದ ಕಬ್ಬಿಗೆ ಕೂಡಲೇ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಗುರ್ಲಾಪುರದಲ್ಲಿ ರೈತ ಮುಖಂಡರಾದ ಶಶಿಕಾಂತ್ ಹಾಗೂ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಬಂದ್‌ಗೆ ಸಂಪೂರ್ಣ ಬೆಂಬಲ ನೀಡುವಂತೆ ಮನವಿ ಮಾಡಲಾಗಿದೆ.
ರೈತರು ನೀಡಿದ್ದ ಡೆಡ್‌ಲೈನ್ ಮುಕ್ತಾಯಗೊಂಡರೂ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು ಈ ಉಗ್ರ ಹೋರಾಟಕ್ಕೆ ಇಳಿದಿದ್ದಾರೆ. ಗ್ರಾಮೀಣ ಭಾಗದಿಂದ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇಂದು ಹೆದ್ದಾರಿ ತಡೆ ನಡೆಸಲಿರುವ ರೈತರು, ನಾಳೆ ‘ಜೈಲ್ ಭರೋ’ ಚಳವಳಿ ಮೂಲಕ ಸರ್ಕಾರದ ವಿರುದ್ಧ ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಸಜ್ಜಾಗಿದ್ದಾರೆ.




