ಹಬ್ಬದ ಸೀಸನ್‌ನಲ್ಲಿ ಜನಸಾಮಾನ್ಯರಿಗೆ ಶಾಕ್ – ಗಗನಕ್ಕೇರಿದ ಸಕ್ಕರೆ ಬೆಲೆ!
Shock for the common man during the festive season – sugar prices skyrocket!

ಬೆಂಗಳೂರು : ಹಬ್ಬದ ಸೀಸನ್‌ನಲ್ಲಿ ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ ಎದುರಾಗಿದೆ. ಸಿಹಿ ತಿನಿಸುಗಳ ತಯಾರಿಯ ಪ್ರಮುಖ ಪದಾರ್ಥವಾದ ಸಕ್ಕರೆ ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
ಶ್ರಾವಣ ಮಾಸ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಿನ್ನೆಲೆ ಸಕ್ಕರೆಗೆ ಹೆಚ್ಚಿದ ಬೇಡಿಕೆ ಹೆಚ್ಚಾಗಿದೆ. ಸಾಲು ಸಾಲು ಹಬ್ಬಗಳ ಟೈಮ್‌ನಲ್ಲಿ ಖರೀದಿದಾರರಿಗೆ ಸಕ್ಕರೆ ಕಹಿಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸಕ್ಕರೆ ಬೆಲೆ ಏರಿಕೆ ಶಾಕ್ ತಟ್ಟಿದೆ.
ಕೇವಲ ಐದು ದಿನಗಳ ಹಿಂದೆ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಸಕ್ಕರೆ ಬೆಲೆ ರೂ. 52 ರಷ್ಟಿತ್ತು. ಆದರೆ, ಪ್ರಸ್ತುತ ಇದು ರೂ. 65 ರಿಂದ 70 ಕ್ಕೆ ಏರಿಕೆಯಾಗಿದೆ.
ಹಳೆಯ ದಾಸ್ತಾನು ಖಾಲಿಯಾಗುತ್ತಿರುವುದರಿಂದ ಮತ್ತು ವ್ಯಾಪಾರಿಗಳು ಪರಿಷ್ಕೃತ ಸಗಟು ದರದಲ್ಲಿ ಖರೀದಿ ಮಾಡಬೇಕಿರುವುದರಿಂದ, ಚಿಲ್ಲರೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ನೇರವಾಗಿ ತಟ್ಟಲಿದೆ. ಕಳೆದ ಎರಡು ತಿಂಗಳಲ್ಲಿ ದೇಶೀಯ ಸಕ್ಕರೆ ಬೆಲೆಯಲ್ಲಿ ಸುಮಾರು 40% ರಷ್ಟು ಏರಿಕೆ ಕಂಡುಬಂದಿದೆ.




