New delhi

ದುಬೈ – ಮುಂಬೈ ಇಂಡಿಗೋ ವಿಮಾನ ರಾಜ್‌ಕೋಟ್‌ನಲ್ಲಿ ತುರ್ತು ಭೂಸ್ಪರ್ಶ!

Dubai - Mumbai Indigo flight makes emergency landing at Rajkot!

ಗಾಂಧಿನಗರ : ದುಬೈನಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಕಾರ್ಗೋ ಹೋಲ್ಡ್‌ನಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಗುಜರಾತ್‌ನ ರಾಜಕೋಟ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ.

ದುಬೈನಿಂದ 194 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಇಂಡಿಗೋ ವಿಮಾನವು ಮುಂಬೈ ಕಡೆಗೆ ಸಾಗುತ್ತಿದ್ದ ವೇಳೆ, ವಿಮಾನದ ಲಗೇಜ್‌ ತುಂಬುವ ಸ್ಥಳದಲ್ಲಿ (ಕಾರ್ಗೋ ಹೋಲ್ಡ್) ಹಠಾತ್ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಕೂಡಲೇ ಎಚ್ಚೆತ್ತ ಪೈಲಟ್, ತಕ್ಷಣವೇ ಹತ್ತಿರದಲ್ಲಿದ್ದ ರಾಜಕೋಟ್ ವಿಮಾನ ನಿಲ್ದಾಣದ ಏರ್‌ ಟ್ರಾಫಿಕ್ ಕಂಟ್ರೋಲ್ (ATC) ಅಧಿಕಾರಿಗಳನ್ನು ಸಂಪರ್ಕಿಸಿ ತುರ್ತು ಭೂಸ್ಪರ್ಶಕ್ಕೆ (Emergency Landing) ಅನುಮತಿ ಕೋರಿದ್ದಾರೆ.

ಪೈಲಟ್‌ ಅವರ ಜಾಣ್ಮೆ ಮತ್ತು ತುರ್ತು ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಅಧಿಕಾರಿಗಳು ತಕ್ಷಣವೇ ಲ್ಯಾಂಡಿಂಗ್‌ಗೆ ಅನುಮತಿ ನೀಡಿದ್ದಾರೆ. ವಿಮಾನವು ತುರ್ತು ಭೂಸ್ಪರ್ಶ ಮಾಡಲಿದೆ ಎಂಬ ಸಂದೇಶ ಬರುತ್ತಿದ್ದಂತೆ, ರಾಜಕೋಟ್ ವಿಮಾನ ನಿಲ್ದಾಣದಲ್ಲಿ ತಕ್ಷಣವೇ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಅಗ್ನಿಶಾಮಕ ದಳ, ಆಂಬುಲೆನ್ಸ್‌ಗಳು ಮತ್ತು ವೈದ್ಯಕೀಯ ತುರ್ತು ಸಿಬ್ಬಂದಿಯನ್ನು ರನ್‌ವೇ ಬಳಿ ಸಜ್ಜಾಗಿರಿಸುವ ಮೂಲಕ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಯಿತು.

ಬಳಿಕ ಪೈಲಟ್ ವಿಮಾನವನ್ನು ಅತ್ಯಂತ ಸುರಕ್ಷಿತವಾಗಿ ರಾಜಕೋಟ್ ರನ್‌ವೇ ಮೇಲೆ ಇಳಿಸಿದರು. ವಿಮಾನ ನಿಲ್ಲುತ್ತಿದ್ದಂತೆ ತುರ್ತು ನಿರ್ಗಮನದ ಮೂಲಕ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗೆ ಕರೆತರಲಾಯಿತು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Comments (0)

Your email address will not be published. Required fields are marked *

Back to top button