ಮಣ್ಣಲ್ಲಿ ಮಣ್ಣಾದ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ!
H.D. Deve Gowda's wife Chennamma laid to rest!

ಹಾಸನ : ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಸ್ವಗ್ರಾಮದಲ್ಲಿ ಮಣ್ಣಲ್ಲಿ ಮಣ್ಣಾಗಿದ್ದಾರೆ. ಗೌಡರ ಹುಟ್ಟೂರಾದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಮಾವಿನಕೆರೆಯ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿತು.
ಸಾವಿರಾರು ಗಣ್ಯರು ಹಾಗೂ ಸಾರ್ವಜನಿಕರು ಪಾರ್ಥಿವ ಶರೀರಕ್ಕೆ ಅಂತಿಮ ಪುಷ್ಪನಮನ ಸಲ್ಲಿಸಿದ ಬಳಿಕ, ರಾಜ್ಯ ಪೊಲೀಸ್ ದಳದಿಂದ 3 ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಲಾಯಿತು. ನಂತರ ರಾಷ್ಟ್ರಗೀತೆ ನಮನದೊಂದಿಗೆ ಸರ್ಕಾರಿ ಗೌರವ ವಂದನೆ ಅರ್ಪಿಸಿ, 2 ನಿಮಿಷಗಳ ಕಾಲ ಮೌನಾಚರಣೆ ಆಚರಿಸಲಾಯಿತು. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ದೇವೇಗೌಡರ ಕುಟುಂಬಕ್ಕೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು.
ದೇವೇಗೌಡರು ಮತ್ತು ಕುಟುಂಬಸ್ಥರಿಂದ ಪಾರ್ಥಿವ ಶರೀರಕ್ಕೆ ಅಂತಿಮ ಪೂಜಾ ವಿಧಿವಿಧಾನ ನೇರವೇರಿಸಲಾಯಿತು. ಇದೇ ವೇಳೆ ಅರ್ಚಕರ ತಂಡದಿಂದ ಸ್ತೋತ್ರ ಪಠಣ ಕಾರ್ಯವೂ ನಡೆಯಿತು. ನಂತರ ಮೂರು ಸುತ್ತು ಪಲ್ಲಕ್ಕಿ ಮೆರವಣಿಗೆ ನಡೆಸಿ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ದೇವೇಗೌಡರ ಕಿರಿಯ ಪುತ್ರ ಹೆಚ್.ಡಿ. ರಮೇಶ್ ಅವರು ಅಂತ್ಯಕ್ರಿಯೆಯ ಮುಖ್ಯ ವಿಧಿವಿಧಾನಗಳನ್ನು ನೆರವೇರಿಸಿದರು. ಗುಂಡಿಯಲ್ಲಿ ಗಂಗಾಜಲ ಸಿಂಪಡಿಸಿ ಶುದ್ಧೀಕರಣ ನೆರವೇರಿಸಿದ ಬಳಿಕ ಪಲ್ಲಕ್ಕಿಯಲ್ಲಿ ಹೊತ್ತುತಂದ ಪಾರ್ಥಿವ ಶರೀರವನ್ನ ಇಳಿಸಿ, ಅಂತಿಕ್ರಿಯೆ ಮಾಡಲಾಯಿತು.




