ಚೀನಾದ ಶೂ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ – 28 ಮಂದಿ ಸಜೀವ ದಹನ!
Massive fire at Chinese shoe factory - 28 people burned alive!

ಚೀನಾ : ಚೀನಾದ ಜಿಂಜಿಯಾಂಗ್‌ನಲ್ಲಿರುವ ಶೂ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, 28 ಜನರು ಸಾವನ್ನಪ್ಪಿದ್ದಾರೆ. ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅಗ್ನಿ ಅವಘಡದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾರ್ಖಾನೆಯಿಂದ ಭಾರೀ ಪ್ರಮಾಣದ ಹೊಗೆ ಎದ್ದಿರುವುದು ದಾಖಲಾಗಿದೆ. ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಕಾರ್ಖಾನೆಯ ಒಳಗೆ ಸುಮಾರು 240ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ನೂರಾರು ರಕ್ಷಣಾ ಕಾರ್ಯಕರ್ತರು ಜನರ ರಕ್ಷಣೆಯಲ್ಲಿ ತೊಡಗಿದ್ದರು.
ಕಾರ್ಖಾನೆಯಲ್ಲಿದ್ದ ಹಲವರು ಇನ್ನೂ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ. ಕಾರ್ಖಾನೆಗೆ ಸಂಬಂಧಪಟ್ಟ ಕೆಲವು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅವಘಡದ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ನಿರ್ಲಕ್ಷ್ಯ ತೋರಿ ಈ ಸಾವುನೋವುಗಳಿಗೆ ಕಾರಣರಾದವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಗುಡುಗಿದ್ದಾರೆ.




