ಅಂಬೋಲಿ ಫಾಲ್ಸ್ ಬಳಿ ಗುಡ್ಡ ಕುಸಿತ – ರಸ್ತೆಗೆ ಉರುಳಿದ ಬೃಹತ್ ಬಂಡೆಗಳು!
Landslide near Amboli Falls - Huge rocks rolled onto the road!

ಬೆಳಗಾವಿ : ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಪ್ರಸಿದ್ಧ ಪ್ರವಾಸಿ ತಾಣ ಅಂಬೋಲಿ ಫಾಲ್ಸ್ ಬಳಿ ತಡರಾತ್ರಿ ಭೀಕರ ಗುಡ್ಡ ಕುಸಿತ ಸಂಭವಿಸಿದೆ. ಘಾಟ್ ರಸ್ತೆಗೆ ಬೃಹತ್ ಬಂಡೆಗಳು ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಮಧ್ಯರಾತ್ರಿ ಗುಡ್ಡದ ಮೇಲಿಂದ ಬೃಹತ್ ಬಂಡೆಗಳು ರಸ್ತೆಗೆ ಉರುಳಿ ಬಿದ್ದಿದೆ. ರಸ್ತೆ ಮೇಲೆಯೇ ನಾಲ್ಕು ಬೃಹತ್ ಬಂಡೆಗಳು ಉರುಳಿ ಬಿದ್ದಿದ್ದು, ಭಾರೀ ಅನಾಹುತ ತಪ್ಪಿದೆ. ಘಟನೆಯ ಪರಿಣಾಮ ಮಧ್ಯರಾತ್ರಿ ಕೆಲಹೊತ್ತು ಬೆಳಗಾವಿ-ಸಿಂಧದುರ್ಗ ಸಂಚಾರ ತಾತ್ಕಾಲಿಕ ಸ್ಥಗಿತಗೊಂಡಿತ್ತು.
ಮಹಾರಾಷ್ಟ್ರದ ವ್ಯಾಪಕ ಮಳೆಯಿಂದಾಗಿ ಬೆಳಗಾವಿ ಮತ್ತು ಚಿಕ್ಕೋಡಿ ಗಡಿಭಾಗದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕರುನಾಡಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಮಹಾರಾಷ್ಟ್ರದ ಜಲಾನಯನ ಪ್ರದೇಶದಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ಕೃಷ್ಣಾ ನದಿಪಾತ್ರದಲ್ಲಿ ಪ್ರವಾಹದ ಮುನ್ಸೂಚನೆ ಸಿಗುತ್ತಿದ್ದಂತೆ ಬೆಳಗಾವಿ ಜಿಲ್ಲಾಡಳಿತ ಸಂಪೂರ್ಣ ಅಲರ್ಟ್ ಆಗಿದೆ. ನದಿ ತೀರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
ಈಗಾಗಲೇ ನದಿ ಪಾತ್ರದ ಬಹುತೇಕ ದೇವಸ್ಥಾನಗಳು, ಜಮೀನುಗಳು ಹಾಗೂ ಸಣ್ಣ ಪುಟ್ಟ ಸೇತುವೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಕೃಷ್ಣೆಯ ಈ ರೌದ್ರಾವತಾರಕ್ಕೆ ಗಡಿಭಾಗದ ಗ್ರಾಮಸ್ಥರು ನಡುಗಿ ಹೋಗಿದ್ದು, ದೈನಂದಿನ ಜೀವನಕ್ಕೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.




