KODAGUಮಳೆ

ವಿರಾಜಪೇಟೆಯಲ್ಲಿ ವರುಣನ ಅಬ್ಬರ, ಮನೆ ಮೇಲೆ ಬಿದ್ದ ಬೃಹತ್ ಮರದ ಕೊಂಬೆ!

ಕೊಡಗು ಜಿಲ್ಲೆಯಾದ್ಯಂತ ವರುಣನ ಅಬ್ಬರ ಮುಂದುವರಿದಿದ್ದು, ಭಾರಿ ಗಾಳಿ ಮಳೆಗೆ ಜಿಲ್ಲೆಯ ಹಲವೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದ ಮುಕ್ಕಾಟಿಕೊಪ್ಪ ಎಂಬಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ಬೃಹತ್ ಮರದ ಕೊಂಬೆಯೊಂದು ಮನೆಯ ಮೇಲೆ ಬಿದ್ದಿದೆ. ಈ ಮನೆ ಮುಕ್ಕಾಟಿಕೊಪ್ಪ ನಿವಾಸಿ ಉಮ್ಮರ್ ಎಂಬುವವರಿಗೆ ಸೇರಿದ್ದು, ಘಟನೆ ಸಂಭವಿಸಿದ ವೇಳೆ ಅವರು ಮನೆಯಲ್ಲೇ ಇದ್ದರು. ಆದರೆ ಅದೃಷ್ಟವಶಾತ್ ವಯೋವೃದ್ದ ಉಮ್ಮರ್ ಅವರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದು, ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.

ಜಿಲ್ಲೆಯ ನಾಪೋಕ್ಲು ವ್ಯಾಪ್ತಿಯಲ್ಲೂ ಮಳೆಯ ಆರ್ಭಟ ಜೋರಾಗಿದ್ದು, ಗಾಳಿಯ ವೇಗಕ್ಕೆ ಮರಗಳು ಧರೆಗುರುಳಿವೆ. ನಾಪೋಕ್ಲು ಸಮೀಪದ ಕೊಂಡಗೇರಿಯಲ್ಲಿ ಮರಗಳು ಮನೆ ಹಾಗೂ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಬಿದ್ದ ಪರಿಣಾಮ ಆಸ್ತಿಪಾಸ್ತಿ ಹಾನಿಯಾಗಿದೆ. ಏಕಾಏಕಿ ಸಂಭವಿಸಿದ ಈ ಘಟನೆಯಿಂದ ವಾಹನಗಳು ಜಖಂಗೊಂಡಿದ್ದು, ಮನೆಗಳ ಮೇಲ್ಛಾವಣಿಗೂ ಹಾನಿ ಸಂಭವಿಸಿದೆ. ಕೊಡಗಿನ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗುತ್ತಿರುವುದು ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

ಘಟನೆ ನಡೆದ ತಕ್ಷಣವೇ ಸ್ಥಳೀಯರು ಹಾಗೂ ನೆರೆಹೊರೆಯವರು ಸ್ವಯಂಪ್ರೇರಿತರಾಗಿ ಆಗಮಿಸಿ ಮರ ತೆರವು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಮನೆ ಮತ್ತು ವಾಹನಗಳ ಮೇಲೆ ಬಿದ್ದಿದ್ದ ಮರದ ರೆಂಬೆಗಳನ್ನು ಕತ್ತರಿಸಿ ತೆರವುಗೊಳಿಸುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಗಾಳಿ ಮಳೆಯ ತೀವ್ರತೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ಜಾಗರೂಕತೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

Comments (0)

Your email address will not be published. Required fields are marked *

Back to top button