ದೇಶ/ವಿದೇಶ

LPG ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಇಳಿಕೆ – ಇಂದಿನಿಂದ ಹೊಸ ದರ ಜಾರಿ!

Huge reduction in LPG commercial cylinder prices - new rates effective from today!

ಬೆಂಗಳೂರು : ಕೇಂದ್ರ ಸರ್ಕಾರದಿಂದ ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿದ ಬೆನ್ನಲ್ಲೇ, ದರದಲ್ಲೂ ಭಾರೀ ಕಡಿತ ಮಾಡಲಾಗಿದೆ. ಇಂದಿನಿಂದ ಜಾರಿಗೆ ಬರುವಂತೆ 19 ಕೆ.ಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು 183.50 ರೂ. ಇಳಿಕೆ ಮಾಡಲಾಗಿದೆ.

ಈವರೆಗೆ 3,113.50 ರೂ. ಇದ್ದ ವಾಣಿಜ್ಯ ಸಿಲಿಂಡರ್ ಬೆಲೆ ಈಗ 2,930 ರೂ.ಗೆ ಇಳಿದಿದೆ. ಈ ಮೂಲಕ ಹೋಟೆಲ್, ರೆಸ್ಟೋರೆಂಟ್ ಮತ್ತು ಸಣ್ಣ ಕೈಗಾರಿಕೆಗಳ ಮಾಲೀಕರು ಸ್ವಲ್ಪ ರಿಲೀಫ್‌ ಆಗಿದ್ದಾರೆ. ಆದರೆ, ತೈಲ ಕಂಪನಿಗಳು ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ 14.2 ಕೆಜಿ ತೂಕದ ಗೃಹ ಬಳಕೆಯ ಸಿಲಿಂಡರ್ ಬೆಲೆ ಎಂದಿನಂತೆಯೇ ಮುಂದುವರಿಯಲಿದೆ.

ಕಳೆದ ಕೆಲವು ತಿಂಗಳುಗಳಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿದ್ದ ಸಂಘರ್ಷದಿಂದಾಗಿ ಜಗತ್ತಿನಾದ್ಯಂತ ತೀವ್ರ ಇಂಧನ ಬಿಕ್ಕಟ್ಟು ಎದುರಾಗಿತ್ತು. ಅಮೆರಿಕ ಹಾಗೂ ಇಸ್ರೇಲ್‌ ದಾಳಿಗೆ ಪ್ರತಿಯಾಗಿ ಇರಾನ್ ದೇಶವು ತನ್ನ ನಿಯಂತ್ರಣದಲ್ಲಿದ್ದ ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡಿತ್ತು. ಇದರಿಂದಾಗಿ ಕಚ್ಚಾ ತೈಲ ಮತ್ತು ಎಲ್‌ಪಿಜಿ ಸಾಗಿಸುವ ಹಡಗುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡು, ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳು ಗಗನಕ್ಕೇರಿದ್ದವು.

ಸತತ 4 ಬಾರಿ ಏರಿಕೆಯಾಗಿದ್ದ ವಾಣಿಜ್ಯ ಗ್ಯಾಸ್ ದರ

ಹೊರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿ ಭಾರತಕ್ಕೂ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಭಾರೀ ನಷ್ಟ ಅನುಭವಿಸುತ್ತಿದ್ದ ದೇಶದ ತೈಲ ಕಂಪನಿಗಳು ಕಳೆದ ನಾಲ್ಕು ತಿಂಗಳುಗಳಲ್ಲಿ ಸತತವಾಗಿ ವಾಣಿಜ್ಯ ಎಲ್‌ಪಿಜಿ ದರವನ್ನು ಏರಿಕೆ ಮಾಡಿದ್ದವು.

ಕಳೆದ 4 ತಿಂಗಳ ಬೆಲೆ ಏರಿಕೆಯ ವಿವರ ಹೀಗಿದೆ:

  • ಮಾರ್ಚ್: 144 ರೂ. ಏರಿಕೆ
  • ಏಪ್ರಿಲ್: 195.50 ರೂ. ಏರಿಕೆ
  • ಮೇ: 993 ರೂ. ಏರಿಕೆ
  • ಜೂನ್: 42 ರೂ. ಏರಿಕೆ

ಕಳೆದ ನಾಲ್ಕು ಹಂತಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಬರೋಬ್ಬರಿ 1,374.50 ರೂ. ಗಳಷ್ಟು ದುಬಾರಿಯಾಗಿತ್ತು. ಪ್ರಸ್ತುತ ಜಾಗತಿಕ ಪರಿಸ್ಥಿತಿ ತಿಳಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈಗ 183.50 ರೂ. ಇಳಿಕೆ ಮಾಡುವ ಮೂಲಕ ಗ್ರಾಹಕರಿಗೆ ನಿರಾಳತೆ ನೀಡಲಾಗಿದೆ.

Comments (0)

Your email address will not be published. Required fields are marked *

Back to top button