ಶಾಲಾ ಬಸ್ ಮೇಲೆ ಬಿದ್ದ ಬೃಹತ್ ಮರ – ಓರ್ವ ವಿದ್ಯಾರ್ಥಿ ಸಾವು, 10 ಮಕ್ಕಳಿಗೆ ಗಂಭೀರ ಗಾಯ!
A huge tree fell on a school bus - one student died, 10 children were seriously injured!

ಮುಂಬೈ : ಶಾಲೆ ಮುಗಿಸಿ ವಿದ್ಯಾರ್ಥಿಗಳನ್ನು ಮನೆಗೆ ಕರೆದೊಯ್ಯುತ್ತಿದ್ದ ಬಸ್ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ 10 ವರ್ಷದ ಬಾಲಕನೋರ್ವ ದಾರುಣವಾಗಿ ಸಾವನ್ನಪ್ಪಿ, 10 ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಮುಂಬೈನ ಚೆಂಬೂರ್ ಪ್ರದೇಶದಲ್ಲಿ ನಡೆದಿದೆ. ಬಸ್ಸಿನೊಳಗೆ ಸಿಲುಕಿರುವ ಮತ್ತೊಬ್ಬ ಬಾಲಕನ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.
ಚೆಂಬೂರಿನ 11ನೇ ನಂಬರ್ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಎಂದಿನಂತೆ ಶಾಲಾ ಬಸ್‌ನಲ್ಲಿ ಮಕ್ಕಳನ್ನು ಅವರ ಮನೆಗಳಿಗೆ ಕರೆದೊಯ್ಯುತ್ತಿದ್ದಾಗ, ರಸ್ತೆ ಬದಿಯಲ್ಲಿದ್ದ ಬೃಹತ್ ಮರ ಬಸ್ಸಿನ ಮೇಲೆಯೇ ಉರುಳಿ ಬಿದ್ದಿದೆ. ಮರ ಬಿದ್ದಿದ್ದರಿಂದ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ 10 ವರ್ಷದ ಬಾಲಕ ಕೊನೆಯುಸಿರೆಳೆದಿದ್ದಾನೆ. ಉಳಿದಂತೆ ಗಾಯಗೊಂಡಿರುವ 10 ಮಕ್ಕಳನ್ನು ರಕ್ಷಣಾ ಸಿಬ್ಬಂದಿ ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿದ್ದು, ಸದ್ಯ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳದಲ್ಲಿ ಮುಂದುವರಿದ ರಕ್ಷಣಾ ಕಾರ್ಯಾಚರಣೆ: ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ರಕ್ಷಣಾ ತಂಡಗಳು ಧಾವಿಸಿವೆ. ಸದ್ಯ ಬಸ್ಸಿನ ಅವಶೇಷಗಳ ನಡುವೆ ಮತ್ತೊಬ್ಬ ಬಾಲಕ ಸಿಲುಕಿಕೊಂಡಿದ್ದು, ಆತನನ್ನು ಸುರಕ್ಷಿತವಾಗಿ ಹೊರತರಲು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಬಿಎಂಸಿ ವಿರುದ್ಧ ಸಾರ್ವಜನಿಕರ ಆಕ್ರೋಶ: ಈ ದುರಂತಕ್ಕೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಅಧಿಕಾರಿಗಳ ನಿರ್ಲಕ್ಷ್ಯವೇ ನೇರ ಕಾರಣ ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೂಡ ಇದೇ ಪ್ರದೇಶದಲ್ಲಿ ಇಂತಹದ್ದೇ ಘಟನೆಗಳು ಸಂಭವಿಸಿದ್ದವು. ಅಪಾಯಕಾರಿಯಾಗಿರುವ ಮರಗಳನ್ನು ಕತ್ತರಿಸುವಂತೆ ಅಥವಾ ಅಲ್ಲಿಂದ ತೆರವುಗೊಳಿಸುವಂತೆ ಬಿಎಂಸಿ ಅಧಿಕಾರಿಗಳಿಗೆ ಲಿಖಿತವಾಗಿ ಪತ್ರ ಬರೆದು ಮನವಿ ಮಾಡಲಾಗಿತ್ತು. ಆದರೂ ಮುನ್ಸಿಪಲ್ ಕಾರ್ಪೊರೇಷನ್ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರಲಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಧಿಕಾರಿಗಳ ಈ ಬೇಜವಾಬ್ದಾರಿತನಕ್ಕೆ ಈಗ ಅಮಾಯಕ ಮಗುವೊಂದು ಬಲಿಯಾಗುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.