ಅಣ್ಣಾಮಲೈನ ಕ್ಯಾರೆ ಅನ್ನೋರಿಲ್ಲ- ಹೊಸ ಪಕ್ಷ ಕಟ್ತಾರಾ ಮಾಜಿ ಐಪಿಎಸ್ ಅಧಿಕಾರಿ?
Annamalai not happy about BJP dicisions

ಚೆನ್ನೈ: ದಕ್ಷಿಣ ಭಾರತದ ರಾಜಕಾರಣದಲ್ಲಿ ವಿಪರೀತವಾದ ಏರಿಳಿತವಾಗಿದೆ. ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಕಮಲ ಪಾಳಯಕ್ಕೆ ಗುಡ್ಬೈ ಹೇಳಿ, ಹೊಸ ರಾಜಕೀಯ ಪಕ್ಷ ಸ್ಥಾಪಿಸಲು ಸಜ್ಜಾಗುತ್ತಿದ್ದಾರೆಯೇ? ಹೌದು, ಸದ್ಯ ರಾಜಕೀಯ ವಲಯದಿಂದ ಬರುತ್ತಿರುವ ಉನ್ನತ ಮೂಲಗಳ ಮಾಹಿತಿ ಇಂತಹದ್ದೊಂದು ದಟ್ಟ ವದಂತಿಗೆ ಕಾರಣವಾಗಿದೆ. ಬಿಜೆಪಿಯಲ್ಲಿ ಅಣ್ಣಾಮಲೈಗೆ ಮೂರು ಕಾಸಿನ ಮರ್ಯಾದೆ ಇಲ್ಲ. ಅವರನ್ನು ತುಚ್ಛವಾಗಿ ಕಾಣಲಾಗುತ್ತಿದೆ ಎಂಬ ಅಸಮಾಧಾನದ ಬೆನ್ನಲ್ಲೇ, ಅವರು ಹೊಸ ಹಾದಿ ಹಿಡಿಯಲು ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
‘ಮಕ್ಕಳ್ ಶಕ್ತಿ ಇಯಕ್ಕಂ’ ನೂತನ ಪಕ್ಷ!
ಸಮಾನ ಮನಸ್ಕರನ್ನು ಒಂದು ವೇದಿಕೆಗೆ ತಂದು, ತಳಮಟ್ಟದಲ್ಲಿ ಬಲಿಷ್ಠ ಸ್ವಯಂಸೇವಕರ ಪಡೆಯನ್ನು ಮುನ್ನಡೆಸುವುದೇ ಅಣ್ಣಾಮಲೈ ಅವರ ಉದ್ದೇಶವಾಗಿದೆ. ಈ ನೂತನ ಸಂಘಟನೆಗೆ ‘ಮಕ್ಕಳ್ ಶಕ್ತಿ ಇಯಕ್ಕಂ’ (ಜನಶಕ್ತಿ ಚಳವಳಿ) ಎಂದು ಹೆಸರಿಡಲು ತೀರ್ಮಾನಿಸಲಾಗಿದೆ ಎಂಬ ಮಾತುಗಳು ಚೆನ್ನೈನ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ಕೇಂದ್ರ ಸರ್ಕಾರದ ವಿರುದ್ಧಕ್ಕೆ ಟಕ್ಕರ್ ಕೊಟ್ಟ ಸಿಂಗಂ
ಇತ್ತೀಚೆಗೆ ಸಿಬಿಎಸ್ಇ (CBSE) 9ನೇ ತರಗತಿ ವಿದ್ಯಾರ್ಥಿಗಳಿಗೆ ಜಾರಿಗೊಳಿಸಲಾದ ತ್ರಿಭಾಷಾ ನೀತಿಯ ವಿಚಾರದಲ್ಲಿ ಅಣ್ಣಾಮಲೈ ಅವರು ಕೇಂದ್ರದ ಬಿಜೆಪಿ ಸರ್ಕಾರದ ನಿಲುವಿನ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. “ತ್ರಿಭಾಷಾ ನೀತಿಯನ್ನು ತಕ್ಷಣವೇ ಹಿಂಪಡೆಯಬೇಕು. ಇದು ತಮಿಳುನಾಡಿನ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಅನಗತ್ಯ ಮಾನಸಿಕ ಒತ್ತಡವನ್ನು ಉಂಟುಮಾಡುತ್ತಿದೆ.” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದರು.ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದ ಅಣ್ಣಾಮಲೈ ಈ ಬಹಿರಂಗ ಬಂಡಾಯ, ಅವರು ಬಿಜೆಪಿಯಿಂದ ದೂರ ಸರಿಯುತ್ತಿರುವುದರ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕರ್ನಾಟಕದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ‘ಕರ್ನಾಟಕದ ಸಿಂಗಂ’ ಎಂದೇ ಖ್ಯಾತಿ ಗಳಿಸಿದ್ದ ಅಣ್ಣಾಮಲೈ, ತಮ್ಮ ಹುದ್ದೆಗೆ ರಾಜೀನಾಮೆ ನೀಡಿ 2020ರಲ್ಲಿ ರಾಜಕೀಯ ಪ್ರವೇಶಿಸಿದ್ದರು. ಎಲ್. ಮುರುಗನ್ ಅವರ ಬಳಿಕ 2021ರಲ್ಲಿ ತಮಿಳುನಾಡು ಬಿಜೆಪಿಯ ಅತ್ಯಂತ ಕಿರಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು, 2025ರವರೆಗೆ ಪಕ್ಷವನ್ನು ಮುನ್ನಡೆಸಿದ್ದರು. ಆದರೆ, ಇತ್ತೀಚಿನ ಬೆಳವಣಿಗೆಗಳು ಅವರು ಬಿಜೆಪಿಯಲ್ಲಿ ಅಸಮಾಧಾನಗೊಂಡಿರುವುದನ್ನು ಸಾಬೀತುಪಡಿಸುತ್ತಿದ್ದು, ತಮಿಳುನಾಡು ರಾಜಕೀಯದಲ್ಲಿ ಹೊಸ ಆಧ್ಯಾಯ ಬರೆಯಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.
ಇದೀಗ ಅಣ್ಣಾಮಲೈ ಅವರ ಮುಂದಿನ ಹೆಜ್ಜೆ ಇಡೀ ದಕ್ಷಿಣ ಭಾರತದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
#FreedomTV #Annamalai #AnnamalaiNewParty #MakkalSakthiIyakkam #TamilNaduPolitics #BJP #AnnamalaiQuitsBJP #IPSAnnamalai #CentralGovernment #ThreeLanguageFormula #KarnatakaSingam #PoliticalBreaking #IndiaPolitics




