
ಬೆಂಗಳೂರು: ರಾಜ್ಯ ರಾಜಕಾರಣದ ಐತಿಹಾಸಿಕ ಬದಲಾವಣೆಯ ಪರ್ವದ ನಡುವೆ, ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಇಡೀ ನಾಡಿನ ಜನರ ಕಣ್ಣುಗಳನ್ನು ತೇವಗೊಳಿಸಿದೆ. ರಾಜೀನಾಮೆ ನೀಡಿದ ತಕ್ಷಣವೇ ಸಿದ್ದರಾಮಯ್ಯ ಅವರು ತಮ್ಮ ಮುಂದಿನ ರಾಜಕೀಯ ನಡೆ ಹಾಗೂ ಸಿದ್ಧಾಂತಗಳ ಬಗ್ಗೆ ಭಾವುಕ ಮತ್ತು ನಿರ್ದಿಷ್ಟ ಪೋಸ್ಟ್ ಹಾಕಿದ್ದಾರೆ

ನನ್ನ ರಾಜೀನಾಮೆ CM ಕುರ್ಚಿಗೆ ಮಾತ್ರ,!
ತಮ್ಮ ಪೋಸ್ಟ್‌ನಲ್ಲಿ ಅತ್ಯಂತ ಗಟ್ಟಿಯಾಗಿ ರಾಜಕೀಯ ವಿರೋಧಿಗಳಿಗೆ ಸಂದೇಶ ರವಾನಿಸಿರುವ ಸಿದ್ದರಾಮಯ್ಯ, “ನನ್ನ ರಾಜೀನಾಮೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರ, ಸಕ್ರಿಯ ರಾಜಕಾರಣಕ್ಕಲ್ಲ. ನನ್ನ ಸಾರ್ವಜನಿಕ ಜೀವನ ಅಥವಾ ಜನರ ಬಗೆಗಿನ ನನ್ನ ಬದ್ಧತೆಯಿಂದ ನಾನು ದೂರ ಸರಿಯುತ್ತಿಲ್ಲ. ನನ್ನ ಜೀವದಲ್ಲಿ ಕೊನೆಯುಸಿರು ಇರುವವರೆಗೆ ಸಾಮಾಜಿಕ ನ್ಯಾಯಕ್ಕಾಗಿ, ಸಂವಿಧಾನದ ಉಳಿವಿಗಾಗಿ ಮತ್ತು ಸಮಾಜವನ್ನು ಒಡೆಯುವ ವಿಭಜಕ ಕೋಮು ಶಕ್ತಿಗಳ ವಿರುದ್ಧ ನನ್ನ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ” ಎಂದು ಶಪಥ ಮಾಡಿದ್ದಾರೆ.
ಸಣ್ಣ ಹುಡುಗನ ದೊಡ್ಡ ಕನಸು ನನಸಾಗಿಸಿದ್ದು ಅಂಬೇಡ್ಕರ್ ಸಂವಿಧಾನ!
ತಮ್ಮ ಹಳೆಯ ದಿನಗಳನ್ನು ಅತ್ಯಂತ ಭಾವುಕವಾಗಿ ಸ್ಮರಿಸಿರುವ ಅವರು, “ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಾನು, ಒಂದು ದಿನ ಶಾಸಕ, ಸಚಿವ, ವಿರೋಧ ಪಕ್ಷದ ನಾಯಕನಾಗುತ್ತೇನೆ ಮತ್ತು ಕರ್ನಾಟಕದ ಮುಖ್ಯಮಂತ್ರಿಯಾಗಿ ಎರಡು ಬಾರಿ ಸೇವೆ ಸಲ್ಲಿಸುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ. ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಬರೆದ ಸಂವಿಧಾನದಿಂದಾಗಿ ಇಷ್ಟೊಂದು ದೊಡ್ಡ ಕನಸು ಸಾಧ್ಯವಾಯಿತು. ಬುದ್ಧ, ಬಸವಣ್ಣ, ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ ಯಾವಾಗಲೂ ನನಗೆ ಮಾರ್ಗವನ್ನು ತೋರಿಸಿದ್ದಾರೆ. ನನ್ನ 48 ವರ್ಷಗಳ ಸಾರ್ವಜನಿಕ ಜೀವನದಲ್ಲಿ, ನಾನು ಯಾವಾಗಲೂ ಬಡವರು, ತುಳಿತಕ್ಕೊಳಗಾದವರು ಮತ್ತು ಸಮಾಜದಲ್ಲಿ ಅವಕಾಶಗಳನ್ನು ನಿರಾಕರಿಸಲ್ಪಟ್ಟವರ ಪರವಾಗಿ ಪ್ರಾಮಾಣಿಕವಾಗಿ ನಿಲ್ಲಲು ಪ್ರಯತ್ನಿಸಿದ್ದೇನೆ. ಅದು ನನ್ನ ಜೀವನದ ಅತ್ಯಂತ ದೊಡ್ಡ ತೃಪ್ತಿ” ಎಂದು ಬರೆದುಕೊಂಡಿದ್ದಾರೆ.
ಹೈಕಮಾಂಡ್ ಹಾಗೂ ಕರ್ನಾಟಕದ ಜನರಿಗೆ ಸಾಷ್ಟಾಂಗ ನಮನ!
ತಮ್ಮ ರಾಜಕೀಯ ಯಶಸ್ಸಿಗೆ ಕಾರಣರಾದವರನ್ನು ನೆನೆದ ಸಿದ್ದರಾಮಯ್ಯ, ತಮ್ಮ ಮೇಲೆ ನಂಬಿಕೆ ಇಟ್ಟಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಪುಟದ ಸಹೋದ್ಯೋಗಿಗಳು ಹಾಗೂ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಕರ್ನಾಟಕದ ಜನರ ಮುಂದೆ ತಲೆಬಾಗಿರುವ ಅವರು, “ಕರ್ನಾಟಕದ ಜನತೆ ನನ್ನನ್ನು ತಮ್ಮವರಲ್ಲಿ ಒಬ್ಬನಾಗಿ ಪರಿಗಣಿಸಿ, ಆಶೀರ್ವದಿಸಿ, ಪ್ರೋತ್ಸಾಹಿಸಿ, ಕಷ್ಟದ ಸಮಯದಲ್ಲಿ ನನ್ನೊಂದಿಗೆ ನಿಂತಿದ್ದಾರೆ. ಇಂದು ನಾನು ಏನೇ ಆಗಿದ್ದರೂ ಅದು ನಿಮ್ಮಿಂದಲೇ. ಸಂವಿಧಾನವೇ ನನ್ನ ಧರ್ಮ, ಮತ್ತು ಜನರೇ ನನ್ನ ದೇವರು. ಈ ಪ್ರಯಾಣದ ಪ್ರತಿಯೊಂದು ಹಂತದಲ್ಲೂ ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಒಡನಾಟಕ್ಕೆ ಧನ್ಯವಾದಗಳು” ಎಂದು ಪೋಸ್ಟ್ ಕೊನೆಗೊಳಿಸಿದ್ದಾರೆ.
#FreedomTV #Siddaramaiah #SiddaramaiahXPost #SiddaramaiahResigns #KarnatakaPolitics #SocialJustice #AmbedkarConstitution #AntiCommunalFight #MassLeaderSiddhu #SiddaramaiahEmotional #BengaluruNews #BreakingNewsKarnataka #PeopleAreMyGod #ಕನ್ನಡಸುದ್ದಿ #ಸಿದ್ದರಾಮಯ್ಯ_ಟ್ವೀಟ್




