bengaluruರಾಜಕೀಯ

ಕೆಪಿಸಿಸಿ ಭಾರಿ ಬದಲಾವಣೆ- ನಟಿ ಭಾವನಾ,ನಿಕೇತ್ ರಾಜ್ ಸೇರಿ 31 ಸ್ಥಾನ ಖೋತಾ!

Niketh raj mourya and Actress Bhavana Ramanna total 31 people dismissed from KPCC

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಹೈಡ್ರಾಮಾ ನಡೆಯುತ್ತಿರುವ ಬೆನ್ನಲ್ಲೇ, ಇತ್ತ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಕ್ಷದ ಶಿಸ್ತು ಉಲ್ಲಂಘಿಸಿದವರ ವಿರುದ್ಧ ಗುಂಡು ಹಾರಿಸಿದ್ದಾರೆ. ಪಕ್ಷದ ಅ ಪ್ರಮುಖ ಸಭೆಗೆ ಗೈರಾಗಿದ್ದ ಕೈ ಪಾಳಯದ ಪದಾಧಿಕಾರಿಗಳಿಗೆ ದಿಢೀರ್ ಗೇಟ್‌ಪಾಸ್ ನೀಡಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ 3 ಉಪಾಧ್ಯಕ್ಷರು ಹಾಗೂ 29 ಪ್ರಧಾನ ಕಾರ್ಯದರ್ಶಿಗಳನ್ನು ಹುದ್ದೆಯಿಂದ ವಜಾಗೊಳಿಸಿ ಕೆಪಿಸಿಸಿ ಅಧ್ಯಕ್ಷರು ಅದೇಶ ಹೊರಡಿಸಿದ್ದಾರೆ!

ಪೂರ್ವಭಾವಿ ಸಭೆಗೆ ಗೈರಾಗಿದ್ದೇ ಮುಳ್ಳಾಯ್ತು!


ಕಳೆದ ಮೇ 24 ರಂದು ಬೆಂಗಳೂರಿನ ಹೊರವಲಯದಲ್ಲಿ ಕಾಂಗ್ರೆಸ್‌ನ ಅತ್ಯಂತ ಮಹತ್ವದ ಪೂರ್ವಭಾವಿ ಸಭೆ ನಡೆದಿತ್ತು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್ ಪ್ರಕ್ರಿಯೆ), ಜಿಬಿಎ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಪಕ್ಷ ಸಂಘಟನೆ ಕುರಿತು ಚರ್ಚಿಸಲು ಈ ಹೈವೋಲ್ಟೇಜ್ ಸಭೆ ಕರೆಯಲಾಗಿತ್ತು.ಆದರೆ, ಇಷ್ಟೊಂದು ಪ್ರಮುಖ ಸಭೆಯನ್ನೇ ಲಘುವಾಗಿ ಪರಿಗಣಿಸಿ ಗೈರಾಗಿದ್ದ ನಾಯಕರ ಪಟ್ಟಿಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಗಂಭೀರವಾಗಿ ಪರಿಗಣಿಸಿದ್ದರು. ಶಿಸ್ತು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸುರ್ಜೇವಾಲ ನೀಡಿದ ಖಡಕ್ ಸೂಚನೆ ಬೆನ್ನಲ್ಲೇ ಡಿಕೆಶಿ ಈ ಆಪರೇಷನ್ ನಡೆಸಿದ್ದಾರೆ.

ವಜಾಗೊಳಪಟ್ಟ ಪ್ರಮುಖ ನಾಯಕರು!
ಕೆಪಿಸಿಸಿಯ ಈ ದಿಢೀರ್ ಸರ್ಜರಿಯಲ್ಲಿ ಹಲವು ಪ್ರಭಾವಿ ಹಾಗೂ ಹಿರಿಯ ನಾಯಕರು ತಮ್ಮ ಹುದ್ದೆ ಕಳೆದುಕೊಂಡಿದ್ದಾರೆ. 3 ಉಪಾಧ್ಯಕ್ಷರುಗಳಾದ ಕೆ. ಶಿವಮೂರ್ತಿ (ದಾವಣಗೆರೆ),ಬಾಬುರಾವ್ ಜಗೀರ್ದಾರ್ (ಕಲಬುರಗಿ),ಎಂ.ಸಿ. ವೇಣುಗೋಪಾಲ್ (ಬೆಂಗಳೂರು) ಔಟಾಗಿದ್ದು, ಪ್ರಧಾನ ಕಾರ್ಯದರ್ಶಿಗಳಾಗಿದ್ದ ಪ್ರಖರ ವಾಗ್ಮಿ ಹಾಗೂ ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ, ಖ್ಯಾತ ನಟಿ ಭಾವನಾ ರಾಮಣ್ಣ, ಕೆ.ಸಿ. ಪ್ರಭಾಕರ್ ರೆಡ್ಡಿ, ತಿಬ್ಬೇಗೌಡ, ಜುಲ್ಫಿಕರ್ ಅಹ್ಮದ್, ಶಂಕರ್ ದೊಡ್ಡಿ, ರೇಖಾ ಹುಲಿಯಪ್ಪ, ಎಚ್.ಎ. ಷಣ್ಮುಗಪ್ಪ, ಎಂ. ರಾಮಪ್ಪ, ಷಣ್ಮುಗಪ್ಪ ಶಿವಳ್ಳಿ, ಸಿ.ಆರ್. ಮನೋಹರ್, ಎಚ್.ಆರ್. ಶ್ರೀನಾಥ್ ಮತ್ತು ನಾಗೇಶ್ವರ್ ರಾವ್ ಸೇರಿದಂತೆ ಒಟ್ಟು 29 ಪ್ರಧಾನ ಕಾರ್ಯದರ್ಶಿಗಳನ್ನು ಕೆಪಿಸಿಸಿ ಹುದ್ದೆಯಿಂದ ಮುಲಾಜಿಲ್ಲದೇ ಕಿತ್ತೊಗೆಯಲಾಗಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚಟುವಟಿಕೆಗಳು ಗರಿಗೆದರಿರುವ ಹೊತ್ತಲ್ಲೇ, ಡಿ.ಕೆ. ಶಿವಕುಮಾರ್ ಅವರು ಸಂಘಟನಾ ಮಟ್ಟದಲ್ಲಿ ಇಷ್ಟೊಂದು ದೊಡ್ಡ ಕ್ರಮ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಪಕ್ಷದ ಜವಾಬ್ದಾರಿಯನ್ನು ನಿರ್ಲಕ್ಷಿಸುವವರು ಎಷ್ಟೇ ಪ್ರಭಾವಿಯಾಗಿದ್ದರೂ ಮುಲಾಜಿಲ್ಲ ಎಂಬ ಖಡಕ್ ಸಂದೇಶ ರವಾನಿಸುವ ಮೂಲಕ ಡಿಕೆಶಿ ತಮ್ಮ ಸಾಂಸ್ಥಿಕ ಹಿಡಿತವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

#FreedomTV #KPCCSurgery #DKShivakumar #CongressAction #BhavanaRamanna #NikethRajMaurya #RandeepSurjewala #KarnatakaPolitics #CongressMeeting #BreakingNews #KannadaNews

Comments (0)

Your email address will not be published. Required fields are marked *

Back to top button