ಬಂತು.. ಬಂತು ‘ಪುರುಷರ ಹಿತರಕ್ಷಣಾ ಸಮಿತಿ’!
Men welfare association for avoid the family discrimination

ಮಂಡ್ಯ: ಪುರುಷ ಪ್ರಧಾನ ಸಮಾಜ ಎಂದು ಕರೆಯಲ್ಪಡುವ ಇಂದಿನ ದಿನಗಳಲ್ಲೂ ನೂರಾರು ಪುರುಷರು ಮತ್ತು ಗಂಡಂದಿರು ತಮ್ಮ ಹೆಂಡತಿಯರಿಂದ ಹಾಗೂ ಮಹಿಳೆಯರಿಂದ ವಿವಿಧ ರೀತಿಯ ದೌರ್ಜನ್ಯ, ಶೋಷಣೆಗೆ ಒಳಗಾಗುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಇಂತಹ ದೌರ್ಜನ್ಯಕ್ಕೊಳಗಾಗಿ, ಸಮಾಜಕ್ಕೆ ಹೆದರಿ ಅಥವಾ ಕಾನೂನಿನ ಬೆಂಬಲ ಸಿಗದೆ ನೊಂದು ಆತ್ಮಹತ್ಯೆಯ ಹಾದಿ ಹಿಡಿಯುವ ಪುರುಷರ ರಕ್ಷಣೆಗಾಗಿ ಮಂಡ್ಯದ ನೆಲದಲ್ಲಿ ಈಗ ಮಹತ್ವದ ಸಂಘಟನೆಯೊಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. ‘ರಾಷ್ಟ್ರೀಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಸಮಿತಿ’ ಅಡಿ ನೋಂದಾಯಿತ ಸಂಸ್ಥೆಯಾಗಿರುವ ಈ ಸಮಿತಿಯು ಪುರುಷರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಿ, ಅವರಿಗೆ ಕಾನೂನಾತ್ಮಕ ಹಾಗೂ ಸಾಮಾಜಿಕ ರಕ್ಷಣೆ ನೀಡಲು ಪ್ಲಾನ್ ರೂಪಿಸಿದೆ.

ಓ ಗಂಡಸರೇ ಆತ್ಮಹತ್ಯೆ ಏಕೆ – ನಮ್ಮನ್ನು ಸಂಪರ್ಕಿಸಿ ಓಕೆ!
ಇತ್ತೀಚೆಗೆ ಹೆಂಡತಿಯ ಹಿಂಸೆ ಹಾಗೂ ಕೌಟುಂಬಿಕ ಕಲಹ ತಾಳಲಾರದೆ ಯುವ ನ್ಯಾಯಾಧೀಶರೊಬ್ಬರೇ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ನಡೆದಿತ್ತು. ಇಂತಹ ನೂರಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. “ಯಾವುದೇ ಕಾರಣಕ್ಕೂ ಪುರುಷರು ಧೃತಿಗೆಟ್ಟು ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈಹಾಕಬಾರದು. ಅಂಥವರಿಗೆ ಬಲ ತುಂಬಿ, ನ್ಯಾಯ ಕೊಡಿಸುವುದೇ ನಮ್ಮ ಸಮಿತಿಯ ಮುಖ್ಯ ಉದ್ದೇಶ” ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ. ಈ ಸಮಿತಿಯಲ್ಲಿ ರಾಜಕೀಯ ವ್ಯಕ್ತಿಗಳು, ಹಿರಿಯ ವಕೀಲರು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಭಾಗಿಯಾಗಿದ್ದು, ನೊಂದ ಪುರುಷರ ಪರವಾಗಿ ಹೋರಾಡಲಿದ್ದಾರೆ.ಈ ಹಿತರಕ್ಷಣಾ ಸಮಿತಿಗೆ ಸಮಾಜದ ಹಿರಿಯ ಹಾಗೂ ಗಣ್ಯ ನಾಯಕರು ನಾಯಕತ್ವ ವಹಿಸಿಕೊಂಡಿದ್ದಾರೆ.
ಸಮಿತಿಯ ಪ್ರಮುಖ ಪದಾಧಿಕಾರಿಗಳ ವಿವರ ಇಂತಿದೆ
| ಪದಾಧಿಕಾರಿಗಳ ಹೆಸರು | ಹುದ್ದೆ / ಜವಾಬ್ದಾರಿ |
| ಎಚ್. ವಿಶ್ವನಾಥ್ (ಹಳ್ಳಿಹಕ್ಕಿ) | ಗೌರವಾಧ್ಯಕ್ಷರು (ಹಿರಿಯ ರಾಜಕಾರಣಿ) |
| ಕೆ. ಟಿ. ಶ್ರೀಕಂಠೇಗೌಡ | ಅಧ್ಯಕ್ಷರು (ಮಾಜಿ ವಿಧಾನ ಪರಿಷತ್ ಸದಸ್ಯರು) |
| ರಜಿನಿರಾಜ್ | ಸಂಸ್ಥಾಪಕಿ |
| ಎಂ. ಎನ್. ನಟರಾಜು | ಉಪಾಧ್ಯಕ್ಷರು |
| ವೇದಾವಲ್ಲಿ | ಖಜಾಂಚಿ |
| ಜಿ. ಟಿ. ವೀರಪ್ಪ | ಸಹಕಾರ್ಯದರ್ಶಿ |
ಸದಸ್ಯತ್ವ ಹಾಗೂ ದೂರು ಸಲ್ಲಿಕೆ ವಿಧಾನ
ಸಮಿತಿಯು ವ್ಯವಸ್ಥಿತವಾಗಿ ಕೆಲಸ ಮಾಡಲು ಕೆಲವು ನಿಯಮಗಳನ್ನು ರೂಪಿಸಿದ್ದು, ಯಾರು ಬೇಕಾದರೂ ಇದರ ಸದಸ್ಯರಾಗಬಹುದು. ಸಂಘದ ಸದಸ್ಯರಾಗಲು ಇಚ್ಛಿಸುವವರಿಗೆ ರೂ. 2,000 ನಿಗದಿಪಡಿಸಲಾಗಿದೆ. ಅರ್ಜಿ ಶುಲ್ಕ: ದೌರ್ಜನ್ಯಕ್ಕೊಳಗಾಗಿ ಸಮಿತಿಗೆ ಅಧಿಕೃತವಾಗಿ ದೂರು ನೀಡುವ ವ್ಯಕ್ತಿಗೆ ರೂ. 1,000 ಅರ್ಜಿ ಶುಲ್ಕ ಇರಲಿದೆ.: “ಸಾಕಷ್ಟು ಮಂದಿ ಪುರುಷರು ತಮ್ಮ ಹೆಂಡತಿಯರಿಂದಲೇ ಮಾನಸಿಕ ಹಾಗೂ ದೈಹಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಸಮಾಜದಲ್ಲಿ ಕೇವಲ ಮಹಿಳೆಯರ ಪರವಾಗಿ ಧ್ವನಿ ಎತ್ತಲು ನೂರಾರು ಸಂಘಟನೆಗಳಿವೆ, ಆದರೆ ಪುರುಷರ ಅಳಲು ಕೇಳುವವರಿಲ್ಲ. ಪುರುಷರಿಗೆ ಅನ್ಯಾಯವಾದರೆ ಅದರ ವಿರುದ್ಧ ಈ ಸಮಿತಿ ಗಟ್ಟಿಯಾಗಿ ನಿಂತು ಹೋರಾಟ ನಡೆಸಲಿದೆ.”ಮಹಿಳಾ ಮಣಿಯರ ದೌರ್ಜನ್ಯದ ವಿರುದ್ಧ ಗಂಡಸರಿಗಾಗಿ ಆರಂಭವಾಗಿರುವ ಈ ವಿಶಿಷ್ಟ ಸಂಘಟನೆಗೆ ಈಗ ರಾಜ್ಯಾದ್ಯಂತ ಭಾರೀ ಬೆಂಬಲ ಹಾಗೂ ಪ್ರಶಂಸೆ ವ್ಯಕ್ತವಾಗುತ್ತಿದೆ.
#MensRights #SaveTheFamily #MensProtectionCommittee #MandyaNews #HVishwanath #KTShrikanthegowda #MenMentalHealth #KannadaNews #FreedomTV #StopFalseCases #JusticeForMen